ವಾಯುಭಾರ ಕುಸಿತ ಅಕಾಲಿಕ ಮಳೆ: ಅಪಾರ ಬೆಳೆ ಹಾನಿ

ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ನ.20: ವಾಯುಭಾರ ಕುಸಿತದಿಂದ ಉಂಟಾದ ಅಕಾಲಿಕ ಮಳೆಯಿಂದ ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯಾದ್ಯಂತ ರೈತರು ಕಂಗಾಲಾಗುವಂತೆ ಮಾಡಿದೆ.
ಪ್ರಾಥಮಿಕ ಸಮೀಕ್ಷೆಯಲ್ಲಿ 580 ಎಕರೆಯಷ್ಟು ಬೆಳೆ ಹಾನಿಯಾಗಿದ್ದು, ಮೂರು ಮನೆಗಳು ಕುಸಿದು ಬಿದ್ದಿರುವುದು ಸೇರಿದಂತೆ ನಿಖರ ಮಾಹಿತಿ ಸಂಪೂರ್ಣ ವರದಿಯ ನಂತರ ತಿಳಿಯಲಿದೆ.
ಜಿಲ್ಲೆಯಾದ್ಯಂತ ಗುರುವಾರ ರಾತ್ರಿ 10 ಗಂಟೆಯಿಂದ ಆರಂಭವಾದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ 2 ಮನೆಗಳು, ನಗರದ ಕೊಂಡನಾಯಕನಹಳ್ಳಿಯಲ್ಲಿ ಒಂದು ಮನೆ ಬಿದ್ದಿದೆ. ಎರಡ್ಮೂರು ದಿನಗಳ ಹಿಂದೆ ಜಿಟಿಜಿಟಿ ಮಳೆಗೆ ಕಾಕುಬಾಳು ಗ್ರಾಮದಲ್ಲಿ ಎರಡು ಮನೆಗಳು ಸೇರಿ ಒಟ್ಟಾರೆಯಾಗಿ ಐದು ಮನೆಗಳು ಬಿದ್ದಿವೆ.
ಕಲ್ಲಹಳ್ಳಿ, ರಾಜಾಪುರ ಭಾಗದಲ್ಲಿ ಬೆಳೆದಿರುವ ನೂರಾರು ಎಕರೆ ಈರುಳ್ಳಿ ಬೆಳೆ ಹಾಳಾಗಿದೆ. ಇನ್ನೂ ಕಟಾವು ಮಾಡಿದ್ದ ಮೆಕ್ಕೆಜೋಳ ಬೆಳೆ ಮೊಳಕೆ ಒಡೆದಿವೆ. ಸತತ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಫಸಲಿಗೆ ಬಂದ ಅಪಾರ ಬೆಳೆ ಹಾಳಾಗಿದೆ.
ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಭತ್ತದ ಬೆಳೆಯೂ ಹಾಳಾದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಇನ್ನೂ ಮೆಣಸಿನಕಾಯಿ ಬೆಳೆಯೂ ಸಂಪೂರ್ಣ ಹಾಳಾಗಿರುವ ಪ್ರಾಥಮಿಕ ವರದಿಗಳು ತಾಲೂಕಿನ ವಿವಿಧ ಪ್ರದೇಶಗಳಿಂದ ಲಭ್ಯವಾಗಿದೆ.
ರೈತರ ಬೆಳೆಹಾನಿಯ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸುತ್ತಿರುವ ಜಿಲ್ಲಾಡಳಿತ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದು ಕಾರ್ಯವೂ ಪ್ರಗತಿಯಲ್ಲಿದ್ದು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ರೈತರು ಸಹ ಕಣ್ಣೀರುಸುರಿಸುವಂತೆ ಮಾಡಿದೆ.
ಅಕಾಲಿಕ ಮಳೆಯಿಂದಾಗಿ ಈರುಳ್ಳಿ, ಮೆಕ್ಕೆಜೋಳ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕಟಾವು ಮಾಡಿಟ್ಟ ಮೆಕ್ಕೆಜೋಳ ಮೊಳಕೆ ಒಡೆದಿದ್ದರೆ, ಈರುಳ್ಳಿ, ಮೇಣಸಿನಕಾಯಿ ಬೆಳೆ ಮಳೆಗೆ ಹಾನಿಯಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಕೂಗು.
“ಅಕಾಲಿಕ ಮಳೆಯಿಂದ ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ವರದಿಗಳಿಂದ ದೃಢವಾಗಿದೆ. ನಮ್ಮ ಇಲಾಖೆ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇನ್ನೂ ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ. ವರದಿಯ ಪೂರ್ಣ ವಿವಿರ ಲಭ್ಯವಾದ ನಂತರ ನಿಖರ ಮಾಹಿತಿ ತಿಳಿಯಲಿದೆ”.
ಎಚ್. ವಿಶ್ವನಾಥ, ತಹಸೀಲ್ದಾರ್ ಹೊಸಪೇಟೆ.
ಮುಂದುವರೆದ ತುಂಗಭದ್ರಾ ಡ್ಯಾಂ ಒಳಹರಿವು.
ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದ 12 ಗೇಟ್‍ಗಳನ್ನು ತೆರೆದು ಇಂದು ಸಹ 45528 ಕ್ಯುಸೆಕ್ ನೀರು ನದಿಗೆ ಹೊರಬಿಡಲಾಯಿತು.
ಜಲಾಶಯದ ಒಳ ಹರಿವು 45648 ಸಾವಿರ ಕ್ಯುಸೆಕ್ ದಾಟಿರುವ ಹಿನ್ನೆಲೆಯಲ್ಲಿ ಜಲಾಶಯದ 12 ಗೇಟ್‍ಗಳನ್ನು 2 ಅಡಿ ಎತ್ತರಿಸಿ ಜಲಾಶಯಕ್ಕೆ ನೀರು ಹರಿಸಲಾಯಿತು. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಮಂಡಳಿ ಅಧಿಕಾರಿಗಳು ಜಲಾಶಯದಿಂದ ನದಿಗೆ ನೀರು ಹರಿಸುವುದನ್ನು ಮುಂದುವರೆಸಿದೆ.