ವಾಯುನೆಲೆ ಮೇಲೆ ಡ್ರೋಣ್ ದಾಳಿ

ಶ್ರೀನಗರ,ಜೂ.೨೭- ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಸಂಬಂಧ ಪ್ರಧಾನಿ ನರೇಂದ್ರಮೋದಿ ಅವರು ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳ ಮುಖಂಡರ ಜತೆ ದೆಹಲಿಯಲ್ಲಿ ಚರ್ಚೆ ನಡೆಸಿದ ಬೆನ್ನಲ್ಲೆ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನ ಪೋಷಿತ ಉಗ್ರರ ವಿಧ್ವಂಸಕ ಕೃತ್ಯಗಳು ಹೆಚ್ಚಿದ್ದು, ಇಂದು ಮುಂಜಾನೆಯೇ ಡ್ರೋಣ್‌ಗಳ ಮೂಲಕ ಜಮ್ಮುವಿನ ವಾಯುನೆಲೆಯಲ್ಲಿ ಎರಡು ಸ್ಫೋಟಗಳನ್ನು ನಡೆಸಲಾಗಿದೆ. ಈ ಸ್ಫೋಟದಲ್ಲಿ ಇಬ್ಬರು ವಾಯುಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರೋಣ್ ದಾಳಿ ನಡೆಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಜಮ್ಮು ವಾಯುನೆಲೆಯಲ್ಲಿ ಈ ಎರಡೂ ಸ್ಫೋಟಗಳನ್ನು ನಡೆಸಲು ಡ್ರೋಣ್‌ಗಳನ್ನು ಬಳಸಲಾಗಿದೆ.
ಈ ಸ್ಫೋಟದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಶಂಕಿಸಲಾಗಿದೆ. ಈ ಸ್ಫೋಟದ ಬಗ್ಗೆ ಪ್ರಾಥಮಿಕ ತನಿಖೆಗಳು ಆರಂಭವಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಡ್ರೋಣ್ ಬಳಸಿ ಉಗ್ರರು ಸ್ಫೋಟ ನಡೆಸಿದ್ದಾರೆ. ಸ್ಫೋಟಕ್ಕೆ ಕಾರಣವಾಗಿರುವ ಡ್ರೋಣ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅವುಗಳಿಗೆ ನಿಖರವಾದ ಸ್ಥಳ ಮತ್ತು ಗುರಿಯನ್ನು ನೀಡಲಾಗಿದೆ. ಸ್ಫೋಟಕ್ಕೆ ಬಳಸಲಾದ ಐಇಡಿಗಳನ್ನು ಡ್ರೋಣ್‌ಗಳಿಂದಲೇ ಕಳುಹಿಸಲಾಗಿದೆ.
ವಾಯುನೆಲೆಯಲ್ಲಿ ಮೊದಲ ಸ್ಫೋಟವು ಮುಂಜಾನೆ ೧.೪೦ರ ಸುಮಾರಿಗೆ ವಾಯುನೆಲೆಯ ಕಟ್ಟಡದ ಮೇಲ್ಛಾವಣಿ ಮೇಲೆ ನಡೆದಿದ್ದು, ಇದರಿಂದ ಕಟ್ಟಡಕ್ಕೆ ಹಾನಿಯಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲೇ ೨ನೇ ಸ್ಫೋಟ ವಾಯುನೆಲೆಯ ತೆರೆದ ಪ್ರದೇಶದಲ್ಲಿ ನಡೆದಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದು, ಸ್ಫೋಟದ ಶಬ್ಧ ೨ ಕಿ.ಮೀವರೆಗೂ ಕೇಳಿದೆ. ಅದೃಷ್ಟವಶಾತ್ ಈಸ್ಫೋಟದಲ್ಲಿ ಪ್ರಾಣಹಾನಿ ಸಂಭವಿಸಿಲ್ಲ. ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಜಮ್ಮು ವಾಯುನೆಲೆಯಲ್ಲಿ ನಡೆದಿರುವ ಈ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯುದ್ಧದ ಹೊರತಾಗಿ ಬೇರೆ ಸಂದರ್ಭದಲ್ಲಿ ಯಾವುದೇ ಸ್ಥಾಪಿತ ಕಟ್ಟಡಗಳು ಮತ್ತು ನೆಲೆಗಳ ಮೇಲೆ ದಾಳಿ ಮಾಡಬಾರದು ಎಂಬ ಒಪ್ಪಂದಗಳು ಉಲ್ಲಂಘನೆಯಾಗಿದೆ. ಹಾಗಾಗಿ, ಈ ದಾಳಿಯನ್ನು ಗಂಭೀರ ಎಂದು ಪರಿಗಣಿಸಲಾಗಿದೆ. ಭಾರತದ ಪ್ರತಿಕ್ರಿಯೆ ಇದಕ್ಕೆ ಬಹಳ ತೀಕ್ಷ್ಣವಾಗಿ ಇರಲಿದೆ ಎಂದು ಹೇಳಲಾಗುತ್ತಿದೆ.
ಈ ಸ್ಫೋಟದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಭಾರತೀಯ ವಾಯುಪಡೆ, ಜಮ್ಮುವಿನ ಏರ್‌ಫೋರ್ಸ್ ಸ್ಟೇಷನ್‌ನ ತಾಂತ್ರಿಕ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಒಂದು ಸ್ಫೋಟದಿಂದ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ. ಮತ್ತೊಂದು ಸ್ಫೋಟ ತೆರೆದ ಪ್ರದೇಶದಲ್ಲಿ ಸಂಭವಿಸಿದ್ದು, ಯಾವುದೇ ಉಪಕರಣಗಳಿಗೆ ಹಾನಿಯಾಗಿಲ್ಲ. ತನಖೆ ನಡೆದಿದೆ ಎಂದು ಟ್ವೀಟ್ ಮಾಡಿದೆ.
ಸ್ಫೋಟದ ಸ್ವರೂಪವನ್ನು ಪತ್ತೆ ಹಚ್ಚಲು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿದ್ದಾರೆ. ಹಾಗೆಯೇ ರಾಷ್ಟ್ರೀಯ ತನಿಖಾದಳ ಸಹ ಸ್ಥಳಕ್ಕೆ ಧಾವಿಸಿದೆ.ಸ್ಫೋಟ ಸಂಭವಿಸುತ್ತಿದ್ದಂತೆಯೇ ಪೊಲೀಸ್ ತಂಡಗಳು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದವು.
ಈ ತಿಂಗಳ ಆರಂಭದಲ್ಲೇ ಜಮ್ಮು-ಕಾಶ್ಮೀರದ ಭದ್ರತಾ ಪಡೆಗಳು ಶ್ರೀನಗರದ ಚೆನ್ವಾರ ಸರ್ಕಾರಿ ವಸತಿ ಗೃಹದ ಬಳಿ ಸುಮಾರು ೧೦ ಕೆಜಿ ತೂಕದ ಸ್ಫೋಟಕಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಲಾಯಿತು. ಈಗ ಜಮ್ಮು
ವಾಯುನೆಲೆಯಲ್ಲಿ ಸ್ಫೋಟ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
೨೦೧೬ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್ ಭಾರತೀಯ ವಾಯುನೆಲೆಯ ಮೇಲೆ ಇದೇ ರೀತಿಯ ದಾಳಿಯನ್ನು ನಡೆಸಲಾಗಿತ್ತು. ಜೈಷ್-ಇ-ಮೊಹ್ಮದ್ ಭಯೋತ್ಪಾದಕ ಸಂಘಟನೆಯ ನಾಲ್ವರು ಭಯೋತ್ಪಾದಕರು ವಾಯುನೆಲೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಭದ್ರತಾ ಪಡೆ ಯೋಧರು ಹಾಗೂ ಐವರು ದಾಳಿಕೋರರು ಮೃತಪಟ್ಟಿದ್ದರು.

ವಾಯುನೆಲೆಯಲ್ಲಿ ನಡೆದಿದ್ದ ಎರಡು ಸ್ಫೋಟಗಳ ದಾಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಏರ್‌ಮಾರ್ಷಲ್ ವಿಕ್ರಂಸಿಂಗ್ ಶೀಘ್ರ ಜಮ್ಮು ತಲುಪಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಮಾಹಿತಿ ನೀಡಿದ್ದಾರೆ.
ಈ ನಡುವೆ ಭಾರತೀಯ ವಾಯುಪಡೆಯ ಉನ್ನತ ಮಟ್ಟದ ತನಿಖಾ ತಂಡ ಜಮ್ಮು ತಲುಪಲಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಾಯುಪಡೆಯ ಉಪ ಮುಖ್ಯಸ್ಥ ಏರ್‌ಮಾರ್ಷಲ್ ಎಚ್.ಎಸ್ ಅರೋರಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ಟ್ವೀಟ್‌ನಲ್ಲಿ ರಕ್ಷಣಾ ಸಚಿವರ ಕಾರ್ಯಾಲಯ ತಿಳಿಸಿದೆ.
ಇಂದು ಬೆಳಿಗ್ಗೆಯೇ ಜಮ್ಮುವಿನ ವಾಯುಪಡೆಯ ನೆಲೆಯೊಳಗೆ ದಾಳಿ ನಡೆಸಲು ಎರಡು ಡ್ರೋಣ್‌ಗಳನ್ನು ಬಳಸಿರುವುದನ್ನು ಪತ್ತೆ ಹಚ್ಚಿವೆ.
ಈ ಪ್ರದೇಶದಲ್ಲಿ ನಿಲ್ಲಿಸಿರುವ ವಿಮಾನಗಳನ್ನು ಗುರಿಯಾಗಿಸಿ, ಡ್ರೋಣ್‌ಗಳ ಬಳಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ದೊಡ್ಡ ಹಾನಿ ವರದಿಯಾಗಿಲ್ಲ. ಇಬ್ಬರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಭಾರತೀಯ ವಾಯುಪಡೆಯ ಪ್ರಕಾರ ಒಂದು ಸ್ಫೋಟ ಕಟ್ಟಡದ ಮೇಲ್ಛಾವಣಿಗೆ ಹಾನಿಯುಂಟುಮಾಡಿದೆ. ಮತ್ತೊಂದು ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ. ಪ್ರಸ್ತುತ ಘಟನೆ ಕುರಿತಂತೆ ಸಿವಿಲ್ ಏಜೆನ್ಸಿಗಳ ಜತೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.