ವಾಪಾಸ್ಸಾಗಲು ಪವಾರ್ ಶಾಸಕರ ಬಣ ನಿರ್ಧಾರ

ಮುಂಬೈ,ಜೂ.೬- ಮಹಾರಾಷ್ಟ್ರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಬಣದೊಂದಿಗೆ ಗುರುತಿಸಿಕೊಳ್ಳಲು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣದ ೧೮ ರಿಂದ ೧೯ ಶಾಸಕರು ಮರಳಿ ವಾಪಸ್ಸಾಗಲು ಮುಂದಾಗಿದ್ದು ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಬದಲಾವಣೆ ಪರ್ವಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಎನ್‌ಸಿಪಿ (ಎಸ್‌ಸಿಪಿ) ಅಭ್ಯರ್ಥಿಗಳಾದ ನೀಲೇಶ್ ಲಂಕೆ ಮತ್ತು ಬಜರಂಗ್ ಸೋನಾವಾನೆ ಅವರು ಅಹ್ಮದ್‌ನಗರ ಮತ್ತು ಬೀಡ್ ಲೋಕಸಭಾ ಸ್ಥಾನಗಳನ್ನು ಗೆದ್ದ ನಂತರ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಕೆಲವು ಶಾಸಕರು ಶರದ್ ಪವಾರ್ ಬಣಕ್ಕೆ ಬರಲು ಸಜ್ಜಾಗಿದ್ದಾರೆ
ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವೇಳೆ ಲಂಕೆ ಮತ್ತು ಸೋನಾವಾನೆ ಅಜಿತ್ ಪವಾರ್‍ನಿಂದ ಶರದ್ ಪವಾರ್ ಪಾಳಯಕ್ಕೆ ಬದಲಾಗಿದ್ದರು.
ಶರದ್ ಪವಾರ್ ಅವರ ಮೊಮ್ಮಗ, ಕರ್ಜತ್-ಜಮಖೇಡ್ ಶಾಸಕ ರೋಹಿತ್ ಪವಾರ್ ಪ್ರತಿಕ್ರಿಯೆ ನೀಡಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣದೊಂದಿಗೆ ಗುರುತಿಸಿಕೊಂಡಿರುವ “ಸುಮಾರು ೧೮ ರಿಂದ ೧೯ ಶಾಸಕರು ಪಕ್ಷಕ್ಕೆ ಮರಳಲು ಆಸಕ್ತಿ ಹೊಂದಿದ್ದಾರೆ, ಆದರೆ ಕಷ್ಟದ ಸಮಯದಲ್ಲಿ ಶರದ್ ಪವಾರ್ ಅವರೊಂದಿಗೆ ಉಳಿದವರಿಗೆ ಅವರಿಗೆ ಮುಖ್ಯವಾಗಿದೆ ಎಂದಿದ್ದಾರೆ.
ಲೋಕಸಭೆಯ ಫಳಿತಾಂಶದಲ್ಲಿ ಎನ್‌ಸಿಪಿ ಶರದ್ ಪವಾರ್ ಬಣ ಸೇರಿದಂತೆ ಇಂಡಿಯಾ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನಗಳಿಸಿರುವ ಹಿನ್ನೆಲೆಯಲ್ಲಿ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದಕ್ಕೂ ಮುನ್ನವೇ ಶರದ್ ಪವಾರ್ ಬಣ ಸೇರಿಕೊಳ್ಳಲು ಅಜಿತ್ ಪವಾರ್ ಬಣ ಸಜ್ಜಾಗಿದೆ ಎಂದಿದ್ದಾರೆ.
ಎನ್‌ಸಿಪಿಯ ಹಲವು ಶಾಸಕರು ಈಗಾಗಲೇ ಶರದ್ ಪವಾರ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಅಜಿತ್ ಪವಾರ್ ಅವರ ಎನ್‌ಸಿಪಿ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿದೆ. ಮಹಾರಾಷ್ಟ್ರದ ೪೮ ಕ್ಷೇತ್ರಗಳಲ್ಲಿ ಪಕ್ಷವು ಕೇವಲ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು.
ಇದು ಅಜಿತ್ ಪವಾರ್ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಎನ್ ಸಿಪಿ ಬಣದ ಶಾಸಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಎನ್‌ಸಿಪಿ ಶಾಸಕರು ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಕೈ ಕೊಟ್ಟು ಶರದ್ ಪವಾರ್ ಬಣ ಸೇರಿಕೊಳ್ಳಲು ಸಜ್ಜಾಗಿದ್ದಾರೆ.