ವಾನರ ಸೈನ್ಯಕ್ಕೆ ಆಹಾರ ನೀಡುತ್ತಿರುವ ಕರುಣಾಮಯಿ

ಮಧುಗಿರಿ, ಮಾ. ೨೫- ವಾನರ ಸೈನ್ಯ ಮನೆಯ ಸಮೀಪ ಬಂದಾಗ ಮನೆಯಲ್ಲಿ ಇರುವ ಹಣ್ಣು ಹಂಪಲು ಕೊಟ್ಟು ಸಾಗಾಕುವುದು ಸಾಮಾನ್ಯ. ಆದರೆ ಮಾತೃ ಹೃದಯದ ಮಹಿಳೆಯೊಬ್ಬರು ಸುಮಾರು ೨೦ ವರ್ಷಗಳಿಂದ ವಾನರ ಸೈನ್ಯಕ್ಕೆ ಆಹಾರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಲ್ಲೂಕಿನ ಕೋಡಗದಾಲ ಗ್ರಾ.ಪಂ. ವ್ಯಾಪ್ತಿಯ ನಾಗಮ್ಮನ ಪಾಳ್ಯದ ನಿವಾಸಿ ದಿವಂಗತ ಶಿಕ್ಷಕ ಸುಬ್ಬಣ್ಣನವರ ಧರ್ಮಪತ್ನಿ ರುಕ್ಮಿಣಮ್ಮ ೭೨ ರ ಇಳಿ ವಯಸ್ಸಿನಲ್ಲೂ ವಾನರ ಸೈನ್ಯಕ್ಕೆ ಮತ್ತು ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡು ವಾನರ ಮತ್ತು ಪ್ರಾಣಿ ಪ್ರೀತಿ ಮೆರೆದಿದ್ದಾರೆ.
ಪ್ರತಿ ದಿನ ಸಂಜೆ ೫ ಗಂಟೆಗೆ ಕೋಡಗದಾಲ ಗ್ರಾಮದ ಪ್ರಾಥಮಿಕ ಶಾಲೆಯ ಗೇಟಿನ ಮುಂದೆ ಬ್ಯಾಗ್‌ಗಳ ತುಂಬಾ ಆಹಾರ, ಹಣ್ಣುಗಳನ್ನು ಹೊತ್ತು ಹಾಜರಾಗುತ್ತಾರೆ. ಇವರು ಬರುವುದನ್ನೇ ಕಾಯುತ್ತಿರುವ ವಾನರ ಸೈನ್ಯ ಮತ್ತು ಬೀದಿ ನಾಯಿಗಳು ಪ್ರೀತಿಯಿಂದ ಇವರನ್ನು ಸುತ್ತುವರೆಯುತ್ತವೆ. ತಮ್ಮ ಬ್ಯಾಗ್‌ನಿಂದ ವಿವಿಧ ರೀತಿಯ ಹಣ್ಣುಗಳು, ಬಿಸ್ಕತ್ತು ಮತ್ತು ಬ್ರೆಡ್ ತೆಗೆಯುವ ರುಕ್ಮಿಣಮ್ಮ ಎಲ್ಲಾ ವಾನರಗಳಿಗೂ ಮತ್ತು ಬೀದಿ ನಾಯಿಗಳಿಗೆ ಹಣ್ಣು, ಬಿಸ್ಕತ್ತು, ಬ್ರೆಡ್ ನೀಡಿ ಮುದ್ದಾದ ಮಾತುಗಳಿಂದ ವಾನರ ಸೈನ್ಯವನ್ನು ಹತ್ತಿರ ಕರೆದು ಉಪಚರಿಸುತ್ತಾರೆ.
ವಾರಕ್ಕೆ ಮೂರು ಬಾರಿ ಆಟೋ ಮಾಡಿಕೊಂಡು ಪೇಟೆಗೆ ಬರುವ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಆಯಾ ಸೀಸನ್‌ನಲ್ಲಿ ಸಿಗುವ ಹಲಸು, ದ್ರಾಕ್ಷಿ, ದಾಳಿಂಬೆ, ಮಾವಿನಹಣ್ಣು, ಕಡಲೇಕಾಯಿ, ಸೀಬೆ, ಬಿಸ್ಕತ್ತು, ಬ್ರೆಡ್ ಹೀಗೆ ವಿವಿಧ ರೀತಿಯ ಹಣ್ಣು ಮತ್ತು ಪದಾರ್ಥಗಳನ್ನು ತಂದು ವಾನರ ಸೈನ್ಯಕ್ಕೆ ಹಂಚುತ್ತಿದ್ದು, ಈ ಕೆಲಸದಲ್ಲಿ ಕೋಡಗದಾಲ ಗ್ರಾಮದ ಆಟೋ ಹುಡುಗರು ಬಹಳಷ್ಟು ಸಹಕಾರ ನೀಡುತ್ತಾರೆ ಎಂದು ಸ್ಮರಿಸುತ್ತಾರೆ.
ಮೊದ ಮೊದಲು ಮನೆಯ ಹತ್ತಿರ ಬರುತ್ತಿದ್ದ ವಾನರ ಸೈನ್ಯಕ್ಕೆ ಆಹಾರ ನೀಡುತ್ತಿದ್ದೆ. ಅದೇ ಅಭ್ಯಾಸ ಮಾಡಿಕೊಂಡ ಕಪಿಗಳ ಹಿಂಡು ಮನೆಯ ಸಮೀಪ ರಸ್ತೆ ದಾಟಿ ಬರುವಾಗ ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದವು. ಇದರಿಂದ ಮನಸ್ಸಿಗೆ ಬಹಳಷ್ಟು ವೇದನೆಯಾಯಿತು. ಅಂದಿನಿಂದ ನಾನೇ ಪ್ರತಿದಿನ ಸಂಜೆ ಸಮಯದಲ್ಲಿ ಶಾಲೆಯ ಗೇಟ್ ಬಳಿ ಬಂದು ಕೂರುತ್ತೇನೆ. ಅವುಗಳೂ ಸಹ ಸಮಯಕ್ಕೆ ಸರಿಯಾಗಿ ಬಂದು ಆಹಾರ ಸ್ವೀಕರಿಸಿ ಹೋಗುತ್ತವೆ. ಅಲ್ಲದೆ ಆದಾಯ ನೀಡದ ಬೀದಿ ನಾಯಿಗಳನ್ನು ಯಾರು ಸಾಕುತ್ತಾರೆ, ನನಗೆ ಬರುವ ಪಿಂಚಣಿ ಹಣವನ್ನು ಇದಕ್ಕೆ ಉಪಯೋಗಿಸುತ್ತಿದ್ದು, ಇದರಲ್ಲೇ ಸಂತಸ ಕಂಡಿದ್ದೇನೆ. ನನ್ನ ಮೂವರು ಮಕ್ಕಳೂ ಸಹ ನನ್ನ ಕೆಲಸಕ್ಕೆ ಬಹಳಷ್ಟು ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತಾರೆ ರುಕ್ಮಿಣಮ್ಮ.
ಯಾವುದೇ ಸಹಾಯ ನಿರೀಕ್ಷಿಸದೇ ಪ್ರಾಮಾಣಿಕವಾಗಿ ವಾನರ ಸೈನ್ಯದ ಸೇವೆ ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡಿ ಉಪಚರಿಸುತ್ತಿರುವ ಇವರ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.