ವಾದಗಳ ಸಾರಾಂಶ ಸಲ್ಲಿಸಲು ರಾಹುಲ್, ದೂರುದಾರರಿಗೆ ಕೋರ್ಟ್ ಸೂಚನೆ

ರಾಂಚಿ ,ಮೇ. ೧೭- ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಎರಡೂ ಕಡೆಯ ವಾದಗಳ ಸಾರಾಂಶ ಸಲ್ಲಿಸುವಂತೆ ಜಾರ್ಖಂಡ್ ಹೈಕೋರ್ಟ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ದೂರುದಾರ ಬಿಜೆಪಿ ನಾಯಕ ನವೀನ್ ಝಾ ಅವರ ವಕೀಲರಿಗೆ ಸೂಚಿಸಿದೆ.

೨೦೧೮ ರಲ್ಲಿ ಚೈಬಾಸಾದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಆಗಿನ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಸ್ಥಳೀಯ ಬಿಜೆಪಿ ನಾಯಕ ನವೀನ್ ಝಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು

೨೦೧೮ ರಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ರಾಹುಲ್ ಗಾಂಧಿ, ಅವರು “ಹತ್ಯೆ ಆರೋಪಿ ಬಿಜೆಪಿಯಲ್ಲಿ ಮಾತ್ರ ಪಕ್ಷದ ಅಧ್ಯಕ್ಷರಾಗಲು ಸಾಧ್ಯ, ಅದು ಕಾಂಗ್ರೆಸ್‌ನಲ್ಲಿ ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿದ್ದರು

ಉಭಯ ಪಕ್ಷಗಳ ವಾದಗಳ ಸಾರಾಂಶವನ್ನು ಸಲ್ಲಿಸಿದ ನಂತರ, ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ರಾಹುಲ್ ಗಾಂಧಿ ವಕೀಲರು ಸಲ್ಲಿಸಿರುವ ಅರ್ಜಿಯ ಆದೇಶ ಯಾವಾಗ ಪ್ರಕಟಿಸಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಹೈಕೋರ್ಟ್ ತಿಳಿಸಿದೆ.

ಈ ವಿಚಾರದಲ್ಲಿ ಕೆಳ ನ್ಯಾಯಾಲಯ ರಾಹುಲ್ ಗಾಂಧಿಗೆ ನೋಟಿಸ್ ಜಾರಿಗೊಳಿಸಿದ ನಂತರ ಈ ಸೂಚನೆ ನೀಡಲಾಗಿದೆ.

ಇದಕ್ಕೂ ಮುನ್ನ ಜಾರ್ಖಂಡ್ ಹೈಕೋರ್ಟ್ ಈ ಪ್ರಕರಣದ ಆದೇಶವನ್ನು ಕಾಯ್ದಿರಿಸಿದೆ ಮತ್ತು ನ್ಯಾಯಮೂರ್ತಿ ಅಂಬುಜನಾಥ್ ಅವರು ನ್ಯಾಯಾಲಯದಲ್ಲಿ ವಾದ – ಪ್ರತಿವಾದ ಮುಕ್ತಾಯಗೊಳಿಸಿದ್ದಾರೆ.

ರಾಹುಲ್ ಗಾಂಧಿ ಪರವಾಗಿ ವಕೀಲರಾದ ಪಿಯೂಷ್ ಚಿತ್ರೇಶ್ ಮತ್ತು ದೀಪಂಕರ್ ರೈ ವಾದ ಮಂಡಿಸಿದರು.
ಮೇ ೧೨ ರಂದು, ನ್ಯಾಯಾಲಯ ’ಯಾವುದೇ ಬಲವಂತದ ಕ್ರಮ’ ಆದೇಶ ಕೈಗೊಳ್ಳದಂತೆ ಮೇ ೧೬ ರವರೆಗೆ ವಿಸ್ತರಿಸಿತ್ತು.