ವಾತಾವರಣ ಬದಲಾವಣೆಯಿಂದಾಗಿ ಜೀವವೈವಿಧ್ಯಕ್ಕೆ ಧಕ್ಕೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ, ಜೂ. 1 – ಜಾಗತಿಕ ನಾಗಾಲೋಟದ ಪರಿಣಾಮವಾಗಿ ಕೈಗಾರೀಕರಣ, ಅಭಿವೃದ್ದಿ ನೆಪದಲ್ಲಿ ಅರಣ್ಯ ನಾಶಗೊಂಡು ತಾಪಮಾನ ಹೆಚ್ಚಳ ಮತ್ತು ವಾತಾವರಣ ಬದಲಾವಣೆಯಿಂದಾಗಿ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ. ವಿದ್ಯಾಪೀಠ, ಅರಣ್ಯ ಇಲಾಖೆ ಮತ್ತು ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜು ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಸಪ್ತಾಹದ ಅಂಗವಾಗಿ ಚಂದ್ರವಳ್ಳಿ ಪರಿಸರ ಮತ್ತು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ‘ನಮ್ಮ ಭೂಮಿ; ನಮ್ಮ ಭವಿಷ್ಯ’ ಈ ಬಾರಿ ಘೋಷವಾಕ್ಯವಾಗಿದೆ. ಈ ಬಾರಿ ಅತಿಹೆಚ್ಚು ತಾಪಮಾನವನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಅರಣ್ಯ ನಾಶವೂ ಕಾರಣ. ಭೂಮಿಯ ಸವಕಳಿಯನ್ನು ತಡೆಯಬೇಕು. ಅರಣ್ಯವನ್ನು ಹೆಚ್ಚು ಹೆಚ್ಚು ಅಭಿವೃದ್ಧಿಗೊಳಿಸುವತ್ತ ಶ್ರಮಿಸಬೇಕಾಗಿದೆ. ಎಲ್ಲರೂ ಗಿಡಗಳನ್ನು ಹಾಕಿ ಬೆಳೆಸಬೇಕೆಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ದೇವರು ನಮಗೆ ಪ್ರಕೃತಿಯನ್ನು ನೀಡಿ ಸ್ವರ್ಗವನ್ನು ನಿರ್ಮಿಸಿದ್ದಾನೆ. ಆದರೆ ಮಾನವ ಕಾಡನ್ನು ಕಡಿದು ನರಕವಾಗಿಸಿದ್ದಾನೆ. ದೊಡ್ಡ ದೊಡ್ಡ ನಗರಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ. ಇದರಿಂದ ಶುದ್ಧ ಗಾಳಿ ಸಿಗುತ್ತಿಲ್ಲ. ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಮಳೆ-ಬೆಳೆ ಕಡಿಮೆಯಾಗಿ ವಾತಾವರಣದಲ್ಲಿ ಏರುಪೇರನ್ನು ಅನುಭವಿಸುತ್ತಿದ್ದಾನೆ. ಪರಿಸರ ದಿನ ಬಂದಾಗ ಮಾತ್ರ ಅರಣ್ಯದ ಬಗ್ಗೆ ಚಿಂತನೆ ಮಾಡುವುದಾಗಬಾರದು. ಇದು ವರ್ಷವಿಡೀ ನಿರಂತರವಾಗಿರಬೇಕು. ಅಂದಾಗ ಮಾತ್ರ ಗುಡ್ಡ ಬೆಟ್ಟ ಅರಣ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.ಶ್ರೀ ಬಸವಕುಮಾರ ಸ್ವಾಮಿಗಳು ಮಾತನಾಡಿ, ಸರ್ಕಾರ ರೂಪಿಸಿರುವ ದಿನಾಚರಣೆಯನ್ನು ಮಾತ್ರ ಇಲ್ಲಿ ಆಚರಿಸುತ್ತಿಲ್ಲ. ಈ ಹಿಂದೆ ಈ ಪ್ರದೇಶದಲ್ಲಿ ಮುರುಘಾಮಠದಿಂದ ಲಕ್ಷಾಂತರ ಗಿಡಗಳನ್ನು ನೆಟ್ಟಿದ್ದರು. ಅದರ ಫಲವಾಗಿ ಇಲ್ಲಿನ ವಾತಾವರಣ ಹಚ್ಚುಹಸಿರಾಗಿದೆ. ಇದನ್ನು ಇಲ್ಲಿಗೇ ಬಿಡದೇ ಅನೇಕ ರೀತಿಯ ಸಸಿಗಳನ್ನು ಹಾಕುತ್ತ, ಅವುಗಳನ್ನು ಪೋಷಿಸಲಾಗುವುದು. ಅದಕ್ಕಾಗಿಯೇ ಶ್ರೀಮಠದಿಂದ ಏಳೆಂಟು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.