ವಾಣಿಜ್ಯ ಸಿಲಿಂಡರ್ 100 ರೂ. ದುಬಾರಿ

ನವದೆಹಲಿ,ಡಿ.೧- ೧೯ ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರವನ್ನು ತೈಲ ಕಂಪನಿಗಳು ಮತ್ತೆ ೧೦೦ ರೂ. ಹೆಚ್ಚಳ ಮಾಡಿವೆ.
ಕಳೆದ ತಿಂಗಳು ೨೬೬ ರೂ. ಹೆಚ್ಚಳ ಮಾಡಿದ್ದ ಬೆನ್ನಲ್ಲೆ ಇದೀಗ ಡಿಸೆಂಬರ್ ತಿಂಗಳ ಮೊದಲ ದಿನವೇ ತೈಲ ಕಂಪನಿಗಳು ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದೆ.
ಈಗಾಗಲೇ ಹೋಟೆಲ್‌ನಲ್ಲಿ ತಿಂಡಿ-ತಿನಿಸುಗಳ ದರ ಗಗನಕ್ಕೇರಿದ್ದು, ಈಗ ವಾಣಿಜ್ಯ ಸಿಲಿಂಡರ್‌ಗಳ ದರ ೧೦೦ ರೂ.ಗೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಇದರಿಂದಾಗಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ೨,೧೦೧ ರೂ.ಗೆ ತಲುಪಿದೆ.
ನವೆಂಬರ್‌ನಲ್ಲಿ ವಾಣಿಜ್ಯ ಸಿಲಿಂಡರ್ ದರ ೨೫೦ ರೂ. ಇತ್ತು, ಗೃಹ ಬಳಕೆಗೆ ಬಳಸುವ ೨೪.೨ ಕೆಜಿ ಸಿಲಿಂಡರ್ ಧಾರಣೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇದರಿಂದಾಗಿ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಆದರೆ, ವಾಣಿಜ್ಯ ಬಳಕೆಗೆ ಬಳಸುವ ೧೯ ಕೆಜಿ ಸಿಲಿಂಡರ್ ದರ ಗಣನೀಯವಾಗಿ ಏರಿಕೆಯಾಗುತ್ತಿರುವುದು ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಇದು ಗ್ರಾಹಕರ ಮೇಲೆ ಪರಿಣಾಮ ಬೀರಿದೆ.
೧೯ ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಕೊಲ್ಕತ್ತಾದಲ್ಲಿ ಸಿಲಿಂಡರ್ ದರ ೨,೧೭೭, ಮುಂಬೈ ೨,೦೫೧ ರೂ. ಚೆನ್ನೈ ೨,೫೩೪ ರೂ.ನಷ್ಟಿದೆ.
ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್ ದರ ಏರಿಕೆಯಾಗದಿದ್ದರೂ ಮುಂಬರುವ ದಿನಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆ ಇದೆ.
ಕೇವಲ ಪೆಟ್ರೋಲ್-ಡೀಸಲ್, ಅಡುಗೆ ಅನಿಲ ಮಾತ್ರವಲ್ಲ, ದಿನನಿತ್ಯ ಬಳಕೆಯ ವಸ್ತುಗಳ ದರವು ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಇತ್ತೀಚೆಗಷ್ಟೇ ಡೀಸಲ್, ಪೆಟ್ರೋಲ್ ಮೇಲಿನ ಸುಂಕ ಕಡಿಮೆ ಮಾಡಿದ್ದರಿಂದ ವಾಹನ ಸವಾರರ ಹೊರೆ ಕಡಿಮೆಯಾಗಿದೆ. ಆದರೆ, ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್ ದರವನ್ನು ಇಳಿಸಲು ಪ್ರಧಾನಿ ನರೇಂದ್ರಮೋದಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.