ವಾಣಿಜ್ಯ ಸಿಲಿಂಡರ್ ೩೬ ರೂ. ಇಳಿಕೆ

ನವದೆಹಲಿ,ಆ.೧- ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಇಂದು ೩೬ ರೂ. ಇಳಿಕೆ ಮಾಡಲಾಗಿದೆ. ತಿಂಗಳ ಆರಂಭದಲ್ಲೇ ದರ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆದಾರರು ತುಸು ನಿರಾಳರಾಗಿದ್ದಾರೆ.
ಕಳೆದ ತಿಂಗಳು ಜೂ. ೧ ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ೧೩೫ ರೂ.ಗೆ ಇಳಿಕೆ ಮಾಡಲಾಗಿತ್ತು. ೩೬ ರೂ. ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ೧,೯೭೬ ರೂ.ನಷ್ಟಿದೆ. ಈ ಮೊದಲು ೨,೦೧೨.೫೦ ಪೈಸೆಯಷ್ಟಿತ್ತು. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಜು. ೧ ರಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ೧೯೮ ರೂ.ನಷ್ಟು ಕಡಿಮೆ ಮಾಡಲಾಗಿತ್ತು.
ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ೧೯೭೬.೫೦, ಕೊಲ್ಕತ್ತದಲ್ಲಿ ೨,೦೯೫ ಹಾಗೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ೧,೯೩೬.೫೦ ಪೈಸೆಯಷ್ಟಿದೆ.
ಸಬ್ಸಿಡಿರಹಿತ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಗೃಹ ಬಳಕೆಯ ಸಿಲಿಂಡರ್ ದರ ೧೦೫೩ ರಷ್ಟಿದೆ.