ವಾಣಿಜ್ಯ ಶಾಸ್ತ್ರದತ್ತ ಹೆಚ್ಚುತ್ತಿರುವ ವಿದ್ಯಾರ್ಥಿನಿಯರ ಒಲವು

ಕೋಲಾರ,ಮಾ,೨೭- ಸ್ವಾವಲಂಬಿ ಬದುಕಿಗೆ ದಾರಿ ತೋರುವ ಹಾದಿಯಲ್ಲಿ ವಾಣಿಜ್ಯ ಶಿಕ್ಷಣ ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿದ್ದು, ಯಾವುದೇ ಮಾದರಿಯ ಸಂಸ್ಥೆಗಳ ಹಣಕಾಸು,ಕಾರ್ಯ ನಿರ್ವಹಣೆಗೆ ಅತಿ ಮುಖ್ಯವಾಗುವ ಮೂಲಕ ಶಿಕ್ಷಣಾರ್ಥಿಗಳಿಗೆ ಉದ್ಯೋಗ ಭದ್ರತೆ ಖಚಿತ ಎಂಬ ಭಾವನೆ ಬಲಗೊಳ್ಳುತ್ತಿದೆ ಎಂದು ಕೆಜಿಎಫ್ ಮಹಾವೀರ್ ಭಗವಾನ್ ಜೈನ್ ಕಾಲೇಜಿನ ಅಸೋಸಿಯೇಟ್ ಪ್ರೊಫೇಸರ್ ರಾಧಾ ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಕಾರ್ಯತಂತ್ರ ಮತ್ತು ಹಣ ನಿರ್ವಹಣೆ’ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
ಒಂದು ಕಾಲದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಉತ್ತೇಜನ ಇರಲಿಲ್ಲ ಆದರೆ ಇಂದು ಪ್ರತಿ ಉದ್ಯಮ,ಸರ್ಕಾರಿ ಉದ್ಯೋಗ,ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲಾ ಕಡೆಯೂ ವಾಣಿಜ್ಯ ಶಿಕ್ಷಣ ಕಲಿತವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಆರ್ಥಿಕ ನೀತಿ, ತೆರಿಗೆ ನೀತಿಯ ಅನುಷ್ಠಾನದಲ್ಲಿ ವಾಣಿಜ್ಯ ಶಾಸ್ತ್ರ ಅಧ್ಯಯನ ಮಾಡಿದವರ ಪಾತ್ರ ಮಹತ್ತರವಾಗಿದ್ದು, ಇಂದು ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿಗೆ ಪ್ರಥಮ ಆಯ್ಕೆ ಮಾಡಿಕೊಳ್ಳುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರು ವಿದ್ಯಾರ್ಥಿಗಳನ್ನು ಸಮುದ್ರದತ್ತ ಕರೆದೊಯ್ಯುವ ಕೆಲಸ ಮಾಡುತ್ತಾರೆ ಆದರೆ ಆ ಅಲೆಗಳ ನಡುವೆ ಈಜಿ ದಡ ಸೇರುವುದು ನಿಮ್ಮ ಜವಾಬ್ದಾರಿ ಎಂದ ಅವರು, ನಿಮಗೆ ಪುಸ್ತಕ ನೀಡಿ, ಅದರಲ್ಲಿನ ಪ್ರತಿ ವಿಷಯವನ್ನು ಮನಮುಟ್ಟುವಂತೆ ವಿವರಿಸುವ ಕೆಲಸ ಶಿಕ್ಷಕರದ್ದು, ಆದರೆ ಅದನ್ನು ಏಕಾಗ್ರತೆಯಿಂದ ಅರಿತು, ಅಭ್ಯಾಸ ಮಾಡಿ ಸಾಧಕರಾಗುವುದು ನಿಮ್ಮ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಸಂಯೋಜಕ ಡಾ.ರಮೇಶ್ ಮಾತನಾಡಿ, ವಾಣಿಜ್ಯ ಶಾಸ್ತ್ರ ಇಂದು ಜೀವನದೊಂದಿಗೆ ಬೆಸೆದುಕೊಂಡು ಬಿಟ್ಟಿದೆ, ಆರ್ಥಿಕ ವ್ಯವಹಾರಗಳ ಡಿಜಟಲೀಕರಣ, ಜಿಎಸ್‌ಟಿ ತೆರಿಗೆ ನಿರ್ವಹಣೆ, ವ್ಯವಹಾರಗಳ ದಾಖಲು ಮತ್ತಿತರ ಕಾರಣಗಳಿಂದ ಪ್ರತಿ ಕುಟುಂಬ, ಅಂಗಡಿ, ಸಂಸ್ಥೆ ಸೇರಿದಂತೆ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿ ಹೋಗಿದೆ ಎಂದರು.