ವಾಣಿಜ್ಯ ಚಟುವಟಿಕೆ ಹೆಚ್ಚಿಸುವ ಕೆಲಸವಾಗಲಿ : ಮುರಗಿ


ಬಾಗಲಕೋಟೆ,ಸೆ 25: ಜಿಲ್ಲೆಯಲ್ಲಿ ತಯಾರಾಗುವ ಸಿದ್ದ ವಸ್ತುಗಳನ್ನು ಬೇರೆಡೆ ರಪ್ತು ಮಾಡಲು ಉತ್ತೇಜನ ನೀಡುವ ಮೂಲಕ ವಾಣಿಜ್ಯ ಚಟುವಟಿಕೆಗಳನ್ನು ಅಭಿವೃದ್ದಿಪಡಿಸುವ ಕೆಲಸವಾಗಬೇಕೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೈಗಾರಿಕಾ ಇಲಾಖೆ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ವಾಣಿಜ್ಯ ಸಪ್ತಾಹ, ರಫ್ತುದಾರರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮದು ಕೃಷಿ ಪ್ರಧಾನವಾದ ದೇಶವಾಗಿರುವದರಿಂದ ಕಾರ್ಖಾನೆಗಳಿಗೆ ಬೇಕಾದ ಕಚ್ಚಾವಸ್ತುಗಳು ಪೂರೈಕೆಯಾಗಿ ಸಿದ್ದ ವಸ್ತುಗಳು ತಯಾರಾಗುತ್ತವೆ. ವಾಣಿಜ್ಯ ಚಟುವಟಿಕೆ ಹೆಚ್ಚಾದಾಗ ಮಾತ್ರ ಬೇರೆಡೆ ರಪ್ತು ಮಾಡಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ ದೇಶದ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿಗಳು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿಯೂ 13 ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಡಿ.ಗೋಪಾಲರೆಡ್ಡಿ, ರಪ್ತು ಉದ್ಯಮಿದಾರರಿಗೆ ಆತ್ಮ ನಿರ್ಬರ ಯೋಜನೆಯಡಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ. ಸಾಲದಲ್ಲಿ ಸಬ್ಸಿಡಿ ಸಹ ನೀಡಲಾಗುತ್ತದೆ. ಸಣ್ಣ ವಸ್ತುಗಳನ್ನು ಸಹ ರಪ್ತು ಮಾಡಬಹುದಾಗಿದೆ. ಇಲಕಲ್ಲ ಸೀರೆ, ಗುಳೇದಗುಡ್ಡದ ಕಣ, ಜೋಳದ ರೊಟ್ಟಿ ಸೇರಿದಂತೆ ಇತರೆ ವಸ್ತುಗಳನ್ನು ರಪ್ತು ಮಾಡಬಹುದಾಗಿದೆ ಎಂದು ತಿಳಿಸಿದರು.
ಕೆವಿಜಿ ಬ್ಯಾಂಕ್ ರಿಜನಲ್ ಮ್ಯಾನೇಜರ್ ಶ್ರೀಧರ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 76 ಕೆವಿಜಿ ಬ್ಯಾಂಕ್‍ನ ಶಾಖೆಗಳಿದ್ದು, ಕೈಗಾರಿಕೆಗೆ ಸಂಬಂಧಿಸ ಎಲ್ಲ ರೀತಿಯ ಸಾಲ ಸೌಲಭ್ಯಗಳನ್ನು ನಮ್ಮ ಬ್ಯಾಂಕಿನಲ್ಲಿ ಇದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಬಿವಿವ ಸಂಘದ ಕೋಟೆಕಲ್ ಮಹೀಂದ್ರಾ ಬ್ಯಾಂಕ್ ಆರ್‍ಸೆಟಿ ಸಂಸ್ಥೆಯ ನಿರ್ದೇಶಕ ಶರಣಬಸವ ಹೂನೂರ ಮಾತನಾಡಿ ಸಿದ್ದ ವಸ್ತುಗಳ ತಯಾರಿಕೆಗೆ ತರಬೇತಿ ಅಗತ್ಯವಾಗಿದ್ದು, ನಮ್ಮಲ್ಲಿರುವ ಕಚ್ಚಾವಸ್ತುಗಳ ಮೇಲೆ ವಸ್ತುಗಳನ್ನು ತಯಾರಿಸುವ ಕುರಿತಂತೆ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗಾಧರ ಕೋರ್ಪಡೆ, ಜಿಲ್ಲಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಅರುಣ ಕಟ್ಟಿ, ಉಪನಿರ್ದೇಶಕ ಜಿ.ಎಸ್.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.