ವಾಣಿಜ್ಯ ಎಲ್‌ಪಿಜಿ ಪ್ರತಿ ಸಿಲಿಂಡರ್‌ಗೆ ೧೨೨ ರೂ ಇಳಿಕೆ


ನವದೆಹಲಿ, ಜೂ.೧- ಕೋವಿಡ್-೧೯ ಸಾಂಕ್ರಾಮಿಕ ೨ನೇ ಅಲೆಯ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ವಾಣಿಜ್ಯ ಬಳಕೆ ಎಲ್ಪಿಜಿ ಗ್ಯಾಸ್ ದರ ಇಳಿಕೆ ಕಂಡಿದೆ. ಗೃಹ ಬಳಕೆ ಅನಿಲ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತೀಯ ತೈಲ ನಿಗಮದ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ ೧೨೨ರೂ ಕಡಿತ ಮಾಡಿದೆ. ಆದರೆ ೧೪.೨ ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇಂದಿನಿಂದ ಅನ್ವಯವಾಗುವಂತೆ ದೆಹಲಿಯಲ್ಲಿ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಪ್ರತಿ ಸಿಲಿಂಡರ್‌ಗೆ ೧೪೭೩.೫೦ ರೂ.ಗೆ ಇಳಿಕೆಯಾಗಿದೆ. ಈ ಹಿಂದೆ ಅದರ ಬೆಲೆ ೧೫೯೫.೫೦ ರೂ. ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು ೧೨೨ ರೂ.ಗಳಷ್ಟು ಕಡಿತಗೊಂಡಿದೆ.
ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ ೧೯ ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ೪೫.೫೦ ರೂ.ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ ೧೬೪೧ ರೂ.ನಿಂದ ೧೫೯೫.೫ ರೂ.ಗೆ ಇಳಿದಿತ್ತು. ಇದಕ್ಕೂ ಮೊದಲು ಮೇ ತಿಂಗಳ ಮೊದಲು ೧೯ ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು.
ದೆಹಲಿಯಲ್ಲಿ ೧೯ ಕೆಜಿ ಸಿಲಿಂಡರ್ ದರ ೧೪೭೩.೫ರೂಗೆ ಇಳಿಕೆಯಾಗಿದ್ದು, ಮುಂಬೈನಲ್ಲಿ ೧೪೨೨.೫ರೂಗೆ ಇಳಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ೧೫೪೪.೫, ಚೆನ್ನೈನಲ್ಲಿ ೧೬೦೩.೦ರೂ ಗೆ ಇಳಿಕೆಯಾಗಿದೆ.