ವಾಣಿಜ್ಯ ಎಲ್‌ಪಿಜಿ ೩೯ ರೂ. ಇಳಿಕೆ

ಹೊಸದಿಲ್ಲಿ,ಡಿ.೨೨-ಹೊಸ ವರ್ಷಕ್ಕೂ ಮುನ್ನ ಜನ ಸಾಮಾನ್ಯರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ.೩೯.೫೦ ಇಳಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದ ಹೊಸ ಬೆಲೆ ಅನ್ವಯವಾಗಲಿದೆ.
ತೈಲ ಮಾರುಕಟ್ಟೆ ಕಂಪನಿಯು ೧೯ ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಇದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ನೆಮ್ಮದಿ ದೊರೆಯಲಿದೆ.
೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ೩೯ ರೂ.ಗೆ ಇಳಿಕೆಯಾದ ನಂತರ ದಿನ ಬಳಕೆ ಸಿಲಿಂಡರ್ ದೆಹಲಿಯಲ್ಲಿ ೧೭೫೭.೫೦ ರೂ., ಕೋಲ್ಕತ್ತಾದಲ್ಲಿ ೧೮೬೯ ರೂ., ಮುಂಬೈನಲ್ಲಿ ೧೭೧೦ ರೂ. ಮತ್ತು ಚೆನ್ನೈನಲ್ಲಿ ೧೯೨೯.೫೦ ರೂ.ಗೆ ಲಭ್ಯವಾಗಲಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೂ ಮುನ್ನ ತೈಲ ಮಾರುಕಟ್ಟೆ ದರ ಇಳಿಕೆ ಮಾಡಿದೆ.
ಪ್ರಸ್ತುತ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ೯೦೫.೫೦ ರೂ. ಇದೆ. ಉಜ್ವಲ ಯೋಜನೆ ಹೊಂದಿದ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ೩೦೦ ರೂ. ಸಬ್ಸಿಡಿ ಸಿಗುತ್ತಿದೆ. ಉಜ್ವಲ ಯೋಜನೆ ಅಡಿ ವರ್ಷಕ್ಕೆ ಒಟ್ಟು ೧೨ ಸಿಲಿಂಡರ್‌ಗಳಿಗೆ ಈ ಸಬ್ಸಿಡಿ ಹಣ ನೀಡಲಾಗುತ್ತದೆ.
ಈ ಹಿಂದೆ ಡಿಸೆಂಬರ್ ೧ ರಂದು ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗಿದೆ.ಆಗ ಸಿಲಿಂಡರ್ ಬೆಲೆ ೨೧ ರೂ. ಕಡಿಮೆಯಾಗಿದೆ. ಆದರೆ, ಇದಕ್ಕೂ ಮುನ್ನ ನವೆಂಬರ್ ೧೬ ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ೫೭ ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು ಕೆಲವು ಸಮಯದಿಂದ ಪ್ರತಿ ತಿಂಗಳು ಬದಲಾಗುತ್ತಿದೆ.