ವಾಣಿಜ್ಯ ಎಲ್‌ಪಿಜಿ ೧೫೮ ರೂ. ಇಳಿಕೆ

ನವದೆಹಲಿ, ಸೆ.೧-ಇತ್ತೀಚೆಗಷ್ಟೇ ಗೃಹಬಳಕೆಯ ೧೪ ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ೨೦೦ ರೂಪಾಯಿ ಸಬ್ಸಿಡಿ ಘೋಷಣೆ ಮಾಡಲಾಗಿದ್ದು, ಇದೀಗ ವಾಣಿಜ್ಯ ಬಳಕೆಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನೂ ೧೫೮ ರೂಪಾಯಿ ಇಳಿಕೆ ಮಾಡಲಾಗಿದೆ.
ಎಲ್‌ಪಿಜಿ ಗ್ರಾಹಕರಿಗೆ ಪ್ರಮುಖ ಪರಿಹಾರವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ೧೦ ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ೧೫೮ ರೂಪಾಯಿಯಷ್ಟು ಕಡಿತಗೊಳಿಸಿದೆ. ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬರಲಿದ್ದು, ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ ೧,೫೨೨ರೂಪಾಯಿ ಆಗಿದೆ.ಇನ್ನೂ, ದೆಹಲಿಯ ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ ೧,೫೨೨ ರೂ ಆಗಿರಲಿದೆ. ಹಾಗೇ,
ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಮೊದಲ ತಾರೀಖಿನಂದು ದರ ಪರಿಷ್ಕರಣೆ ಮಾಡಲಾಗುತ್ತಿದೆ. ಅದರಂತೆ ಇಂದು ವಾಣಿಜ್ಯ ಬಳಕೆ ಸಿಲಿಂಡರ್‌ನ ಎಲ್‌ಪಿಜಿ ಬೆಲೆಯಲ್ಲಿ ೧೫೮ ರೂ ಕಡಿತ ಮಾಡಿ ತೈಲ ಕಂಪನಿಗಳು ಘೋಷಣೆ ಮಾಡಿವೆ.
ಆಗಸ್ಟ್‌ನಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಒಎಂಸಿಗಳು ೯೯.೭೫ರೂಪಾಯಿ ಕಡಿತ ಮಾಡಿ ಆದೇಶಿಸಿದ್ದವು. ಹೀಗಾಗಿ ಎರಡು ಸಾವಿರದ ಗಡಿ ದಾಟಿದ್ದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ೧೫೦೦ ರ ಗಡಿಗೆ ಬಂದಿದೆ. ಇದು ಹೋಟೆಲ್ ಸೇರಿದಂತೆ ಇನ್ನಿತರ ವಲಯಗಳ ಬಳಕೆದಾರರಿಗೆ ಅನುಕೂಲ ವಾಗಲಿದೆ.ಜುಲೈನಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತಲಾ ೭ ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಏರಿಕೆಗೆ ಮೊದಲು, ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸತತ ಎರಡು ಬಾರಿ ಕಡಿತ ಮಾಡಲಾಗಿತ್ತು.
ಮೇ ತಿಂಗಳಲ್ಲಿ ಒಎಂಸಿ ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ೧೭೨ ರೂಪಾಯಿಗಳಷ್ಟು ಕಡಿಮೆಗೊಳಿಸಿದರೆ, ಜೂನ್‌ನಲ್ಲಿ ೮೩ ರೂಪಾಯಿಗಳಷ್ಟು ದರ ಕಡಿತ ಮಾಡಿದ್ದವು.ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈ ವರ್ಷದ ಮಾರ್ಚ್ ೧ ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ ೩೫೦.೫೦ ರೂ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ ೫೦ ರೂ. ಹೆಚ್ಚಳ ಮಾಡಿ ಆದೇಶಿಸಿದ್ದವು.

ಈಗ ವಾಣಿಜ್ಯ ಎಲ್‌ಪಿಜಿ ದರ ಎಷ್ಟು?
ನೂತನ ವಾಣಿಜ್ಯ ಎಲ್‌ಪಿಜಿ ದರವು ಇಂದಿನಿಂದ ಜಾರಿಗೆ ಬರಲಿದ್ದು, ದೆಹಲಿಯ ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ರಿಟೇಲ್ ಬೆಲೆ ೧,೫೨೨ ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಸಿಲಿಂಡರ್ ದರವು ೧೬೩೬ ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಮುಂಬೈನಲ್ಲಿ ೧೪೮೨ ರೂಪಾಯಿಗೆ ಕುಸಿತ ಕಂಡಿದೆ. ಚೆನ್ನೈನಲ್ಲಿ ೧೬೯೫ ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ದರವು ೧೬೦೯.೫೦ ರೂಪಾಯಿ ಆಗಿದೆ.