
ರಾಯಚೂರು,ಆ.೧೧- ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘವು ವೆಬ್ ಡೈರಕ್ಟರಿ ಪ್ರಾರಂಭಿಸಲಿದೆ ಎಂದು ನೂತನ ಅಧ್ಯಕ್ಷ ಕಮಲಕರ್ ಕುಮಾರ ಜೈನ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಇದರಿಂದ ಉದ್ಯಮಗಳ ಮಾಹಿತಿಗಳೆಲ್ಲವೂ ಒಂದೆಡೆ ಸಿಗುವಂತೆ ಮಾಡುವುದು ಇದರ ಹಿಂದಿನ ಸದುದ್ದೇಶವಾಗಿರುವುದಲ್ಲದೆ ಇದು ಗ್ರಾಹಕ ಸ್ನೇಹಿಯಾಗಿ ಕೂಡಾ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟ ಅವರು,
ಡೈರಕ್ಟರಿಯಲ್ಲಿ ವೈದ್ಯರು, ಕಿರಾಣಿ ಅಂಗಡಿಗಳು ಸೇರಿದಂತೆ ಹತ್ತು ಹಲವು ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೋದ್ಯಮಿಗಳ ಮಾಹಿತಿ ಕೂಡ ಇದರಲ್ಲಿ ಲಭ್ಯವಾಗುವುದರಿಂದ ಪರಸ್ಪರ ಕೊಡು-ಕೊಳ್ಳುವಿಕೆಗೂ ಅನುಕೂಲವಾಗುವುದಲ್ಲದೆ ವ್ಯಾಪಾರ ವೃದ್ಧಿಗೂ ಸಹಕಾರಿಯಾಗಲಿದೆಯಲ್ಲದೆ ಸಮಯದ ಉಳಿತಾಯವೂ ಲಾಭದಾಯಕವೂ ಆಗಲಿದೆ ಎಂದರು.
ಜಿಲ್ಲೆಯಲ್ಲಿ ೬೯೦.೧೩ ಎಕರೆ ಭೂಮಿ ಸ್ವಾಧೀನವು ಅಂತಿಮ ಹಂತ ತಲುಪಿತ್ತು ಅಧಿಸೂಚನೆ ಬಾಕಿ ಇದೆ. ಹಾಗೂ ಇನ್ನೂ ೧೫೦೦ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದು ಬಾಕಿ ಇರುವುದನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಮಾತ್ರವಲ್ಲಿ ಮೆಗಾ ಟೆಕ್ಸಟೈಲ್ಸ್ ರಾಯಚೂರು ಸೂಕ್ತ ಸ್ಥಳವಾಗಿರುವುದರ ವಿವರಗಳನ್ನು ಸಚಿವರಿಗೆ ಒದಗಿಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ಭೂಮಿ ಹಾಗೂ ಸಹಾಯಧನ ಒದಗಿಸಬೇಕು. ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರಿಗೆ ಅರ್ಪಿಸಲಾಗಿದ್ದು ವಾಣಿಜ್ಯೋದ್ಯಮದ ಉತ್ತೇಜನಕ್ಕಾಗಿ ಸರಕಾರ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕೆಂದು ಕೇಳಿಕೊಂಡಿದ್ದೇವೆ. ಇಷ್ಟರಲ್ಲಿಯೇ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಮ್ಮ ಬೇಡಿಕೆಗಳನ್ನು ಅವರ ಗಮನಕ್ಕೆ ತರಲಾಗುವುದೆಂದು ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಹಾಗೂ ವಾಣಿಜ್ಯೋದ್ಯಮ ಬೆಳವಣಿಗೆಗೆ ಪೂರಕವಾಗಿ ಮಾಡಬೇಕಾಗಿರುವ ಕೆಲಸ ಕಾರ್ಯಗಳು ರೂಪಿಸಬೇಕಾದ ಯೋಜನೆಗಳ ಕುರಿತು ಈಗಾಗಲೇ ಕೈಗಾರಿಕಾ ಮಂತ್ರಿ ಎಂ.ಬಿ ಪಾಟೀಲ್ ಅವರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎರಡು ನದಿ ಭಾರತಮಾಲಾ, ಮೂರು ರಾಷ್ಟ್ರೀಯ ಹೆದ್ದಾರಿ ಹೊಂದಿದ್ದು ಕೃಷಿ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣವಿರುವುದನ್ನು ಸಚಿವರ ಗಮನಕ್ಕೆ ತಂದಿದ್ದು, ಸಬ್ಸಿಡಿ ನೀತಿ ವಹಿವಾಟು ಮೇಲೇ ನೀಡದೆ ಬಂಡವಾಳ ಹೂಡಿಕೆ ಮೇಲೆ ಇರಬೇಕು ಎಂದು ಬೇಡಿಕೆ ಮಂಡಿಸಲಾಗಿದೆ. ಗೋದಾಮಿನ ಮಾನದಂಡಗಳನ್ನು ಸಡಿಲಿಸಬೇಕು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ತ್ರಿವಿಕ್ರಮ ಜೋಷಿ, ನಾಗನಗೌಡ,ಉದಯಕಿರಣ,ಮಲ್ಲಿಕಾರ್ಜುನ ದೋತರಬಂಡಿ, ಕೆ.ಮನೋಹರ ಸೇರಿದಂತೆ ಇತರರು ಉಪಸ್ಥಿತರಿದ್ದರು.