ವಾಡಿ ಪುರಸಭೆ ಸಾರ್ವತ್ರಿಕ, ಕಲಬುರಗಿ ಪಾಲಿಕೆ ಮತ್ತು ಶಹಾಬಾದ ನಗರಸಭೆ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟ: ಡಿ. 27ಕ್ಕೆ ಮತದಾನ, 30ಕ್ಕೆ ಮತ ಎಣಿಕೆ

ಕಲಬುರಗಿ,ಡಿ.8: ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪುರಸಭೆಗೆ ಸಾರ್ವತ್ರಿಕ ಚುನಾವಣೆ, ಕಲಬುರಗಿ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 24 ಹಾಗೂ ಶಹಾಬಾದ ನಗರಸಭೆಯ ವಾರ್ಡ್ ಸಂ. 25ಕ್ಕೆ ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಚುನಾವಣಾ ವೇಳಾಪಟ್ಟಿಯ ಅಧಿಸೂಚನೆ ಪ್ರಕಟಿಸಿದ್ದಾರೆ.

ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಡಿಸೆಂಬರ್ 16 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿಸೆಂಬರ್ 18 ಅಂತಿಮ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ಮತದಾನವು ಡಿಸೆಂಬರ್ 27 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆ ವರೆಗೆ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದಲ್ಲಿ ಡಿಸೆಂಬರ್ 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ನಡೆಸಲಾಗುವುದು. ಡಿಸೆಂಬರ್ 30ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಚುನಾವಣೆ ಮುಕ್ತಾಯವಾಗುವವರೆಗೆ ವಾಡಿ ಪುರಸಭೆ ವ್ಯಾಪ್ತಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 24 ಹಾಗೂ ಶಹಾಬಾದ ನಗರಸಭೆ ವಾರ್ಡ್ ಸಂಖ್ಯೆ 25ರ ವ್ಯಾಪ್ತಿಗೆ ಅನ್ವಯಿಸುವಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಾಡಿ ಪುರಸಭೆ ಸಾರ್ವತ್ರಿಕ ಚುನಾವಣೆ, ಕಲಬುರಗಿ ಪಾಲಿಕೆ ಮತ್ತು ಶಹಾಬಾದ ನಗರಸಭೆಯ ವಾರ್ಡ್ ಉಪ ಚುನಾವಣೆಯನ್ನು ಶಾಂತ ರೀತಿಯಿಂದ ಜರುಗುವಂತೆ ಎಲ್ಲಾ ರಾಜಕೀಯ ಪಕ್ಷಗಳು, ಉಮೇದುವಾರರು, ಸಾರ್ವಜನಿಕರು ಸಹಕರಿಸಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.

ವಾಡಿ ಪುರಸಭೆÉ ಸಾರ್ವತ್ರಿಕ ಚುನಾವಣೆ: ಚಿತ್ತಾಪುರ ತಾಲೂಕಿನ ವಾಡಿ ಪುರಸಭೆಯ ವಾರ್ಡ್ ಸಂಖ್ಯೆ 1 ರಿಂದ 12ಕ್ಕೆ ಚುನಾವಣೆ ನಡೆಸಲು ಚಿತ್ತಾಪುರ ಪಶು ವೈದ್ಯಾಧಿಕಾರಿ ಶಂಕರ ಕಣ್ಣಿ-9611732647 ಅವರನ್ನು ಚುನಾವಣಾಧಿಕಾರಿಯಾಗಿ ಮತ್ತು ಚಿತ್ತಾಪುರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಕಾಶಿರಾಯ-9980391460 ಅವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಈ ವಾರ್ಡ್‍ಗಳಿಗೆ ಸಂಬಂಧಪಟ್ಟ ಉಮೇದುವಾರರು ಚಿತ್ತಾಪುರ ರೈಲ್ವೆ ಸ್ಟೇಶನ್ ಹತ್ತಿರದ ಪಶು ಸಂಗೋಪನಾ ಇಲಾಖೆಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ.

 ವಾರ್ಡ್ ಸಂಖ್ಯೆ 13 ರಿಂದ 23ಕ್ಕೆ ಚುನಾವಣೆ ನಡೆಸಲು ಚಿತ್ತಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ಗುರಿಕಾರ್-9900977504 ಅವರನ್ನು ಚುನಾವಣಾಧಿಕಾರಿಯಾಗಿ ಮತ್ತು ಚಿತ್ತಾಪುರ ಆದರ್ಶ ವಿದ್ಯಾಲಯ (ಆಂಗ್ಲ ಮಾಧ್ಯಮ ಶಾಲೆ) ಮುಖ್ಯ ಗುರು ವಿನೋದ ಗೌಳಿ-9880216888 ಅವರನ್ನು ಸಹಾಯಕ ಚುನಾವಣಾಧಿಗಳನ್ನಾಗಿ ನೇಮಿಸಲಾಗಿದೆ. ಈ ವಾರ್ಡ್‍ಗಳಿಗೆ ಸಂಬಂಧಪಟ್ಟ ಉಮೇದುವಾರರು ಚಿತ್ತಾಪುರ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಬೇಕು. ವಾಡಿ ಪುರಸಭೆ ಚುನಾವಣೆಗೆ 11 ಮತಗಟ್ಟೆ ಸ್ಥಾಪಿಸಿದ್ದು, 17,164 ಪುರುಷ, 16,975 ಮಹಿಳೆಯರು, ಇತರೆ-1 ಸೇರಿ ಒಟ್ಟು 34,140 ಜನ  ಮತದಾರರಿದ್ದಾರೆ.


   ಕಲಬುರಗಿ ಪಾಲಿಕೆ ಉಪ ಚುನಾವಣೆ: ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 24ಕ್ಕೆ ಉಪ ಚುನಾವಣೆ ನಡೆಸಲು ಕಲಬುರಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಂದಾರ್-9448999235 ಅವರನ್ನು ಚುನಾವಣಾಧಿಕಾರಿಗಳಾಗಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ಉಪನಿರ್ದೇಶಕ ಸುಸ್ರುತ ಕರೆಡ್ಡಿ-9448190066 ಅವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಈ ವಾರ್ಡ್‍ಗೆ ಸಂಬಂಧಪಟ್ಟ ಉಮೇದುವಾರರು ಕಲಬುರಗಿ ಐವಾನ್-ಎ-ಶಾಹಿ ಪ್ರದೇಶದಲ್ಲಿರುವ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಉಪ ಚುನಾವಣೆಗೆ 7 ಮತಗಟ್ಟೆ ಸ್ಥಾಪಿಸಿದ್ದು, 3,692 ಪುರುಷ, 3,618 ಮಹಿಳೆಯರು, ಇತರೆ-2 ಸೇರಿ ಒಟ್ಟು 7,312 ಜನ ಮತದಾರರಿದ್ದಾರೆ.

ಶಹಾಬಾದ ಉಪ ಚುನಾವಣೆ: ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ 25ಕ್ಕೆ ಉಪ ಚುನಾವಣೆ ನಡೆಸಲು ಭಂಕೂರ ಕರ್ನಾಟಕ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬಾಲರಾಜ್ ಮಾಚನೂರ-9972080156 ಅವರನ್ನು ಚುನಾವಣಾಧಿಕಾರಿಗಳಾಗಿ ಹಾಗೂ ಇದೇ ಕಾಲೇಜಿನ ಉಪನ್ಯಾಸಕ ಶರಣಬಸಪ್ಪ ಮಾಲಿಪಾಟೀಲ-9900633375 ಅವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಉಮೇದುವಾರರು ಶಹಾಬಾದ ನಗರಸಭೆ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು. ಉಪ ಚುನಾವಣೆಗೆ 1 ಮತಗಟ್ಟೆ ಮತ್ತು 1 ಆಕ್ಸಿಲರಿ ಮತಗಟ್ಟೆ ಸ್ಥಾಪಿಸಿದ್ದು, 1,096 ಪುರುಷ, 1,217 ಮಹಿಳೆಯರು ಸೇರಿ ಒಟ್ಟು 2,313 ಜನ ಮತದಾರರಿದ್ದಾರೆ.