ವಾಡಿ-ನಾಲವಾರ ಶಾಂತಿಯುತ ಮತದಾನ

ವಾಡಿ: ಮೇ.8:ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣ, ರಾವೂರ, ಯಾಗಾಪುರ ಹಾಗೂ ನಾಲವಾರ ವಲಯಗಳಲ್ಲಿ ಶಾಂತಿಯುತ ಮತದಾನವಾಗಿದೆ. ಬೆಳಗ್ಗೆಯೇ ಮತದಾನ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದ ಮತದಾರರು, ಬಿರುಬಿಸಿಲು ಲೆಕ್ಕಿಸದೆ ಉತ್ಸಾಹದಿಂದ ಮತದಾನ ಮಾಡುತ್ತಿದ್ದದ್ದು ಕಂಡು ಬಂದಿತು.
ಬಿಸಿಗಾಳಿ ಮತಗಟ್ಟೆ ಕೇಂದ್ರ ಸಿಬ್ಬಂದಿಗಳ ಬೆವರಿಳಿಸಿದರೆ, ಬಿಸಿಲು ಮತದಾರರು ಬಿಸಿಯುಸಿರು ಚೆಲ್ಲುವಂತೆ ಮಾಡಿತು. ಯಾವೂದೇ ಮತದಾನ ಕೇಂದ್ರಗಳಲ್ಲಿ ಗದ್ದಲ ಗಲಾಟೆ ಉಂಟಾಗದೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು. ಮದ್ಯಾಹ್ನ ರಣಬಿಸಿಲಿಗೆ ತುಸು ನೀರಸ ಪ್ರಕ್ರಿಯೆ ವ್ಯಕ್ತವಾದರೆ, ಸಂಜೆ ಮತ್ತೆ ಮತಕೇಂದ್ರಗಳು ಜನರಿಂದ ಕಿಕ್ಕಿರಿದಿದ್ದವು. ಸಚಿವ ಪ್ರಿಯಾಂಕ್ ಖರ್ಗೆ ಅವರು ಲಾಡ್ಲಾಪುರ ಗ್ರಾಮದ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಸುವ್ಯವಸ್ಥೆ ಅವಲೋಕಿಸಿದರು.
ನೆರಳಿನ ವ್ಯವಸ್ಥೆ ಮಾಡದ್ದಕ್ಕೆ ಬಿಜೆಪಿ ಆಕ್ರೋಶ: ವಾಡಿ ಪುರಸಭೆ ವ್ಯಾಪ್ತಿಯ ಕೆಲ ಮತದಾನ ಕೇಂದ್ರಗಳಿಗೆ ಅಗತ್ಯ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಒದಗಿಸದ ಕಾರಣ ಬೆಳಗ್ಗೆ ಮತದಾರರು ಬಿಸಿಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ಪ್ರಸಂಗಗಳು ಕಂಡು ಬಂದವು. ಸುದ್ದಿ ತಿಳಿದು ವಿ.ಪಿ.ನಾಯಕ ಪದವಿಪೂರ್ವ ಕಾಲೇಜು ಮತಗಟ್ಟೆಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮತಗಟ್ಟೆ ಮೇಲ್ವಿಚಾರಕರ ವಿರುದ್ಧ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು. ಸಮಪರ್ಕವಾಗಿ ಕುಡಿಯುವ ನೀರು, ನೆರಳು ಹಾಗೂ ಫ್ಯಾನ್ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಮತದಾರರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ಕಾಲೇಜು ಮತಗಟ್ಟೆಗೆ ಪುರಸಭೆ ಅಧಿಕಾರಿಗಳು ಶಾಮಿಯಾನ ಹಾಕಿಸಿ ನೆರಳಿನ ವ್ಯವಸ್ಥೆ ಮಾಡಿದ್ದರಾದರೂ ಅದು ಮತದಾರರ ಅನುಕೂಲಕ್ಕೆ ಇರಲಿಲ್ಲ. ಬಿಜೆಪಿ ಮುಖಂಡರ ಟೀಕೆಯಿಂದ ಎಚ್ಚೆತ್ತ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ ತಕ್ಷಣ ನೆರಳಿನ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಿದರು.