ವಾಡಿಯಲ್ಲಿ ಸಂತ್ ಸೇವಾಲಾಲ್ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಗಲಾಟೆ: ಪೋಲಿಸರಿಂದ ಲಘು ಲಾಠಿ ಪ್ರಹಾರ

ಕಲಬುರಗಿ:ಫೆ.15: ಸಂತ್ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ನಿಮಿತ್ಯ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಜರುಗಿದ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯನ್ನು ತಡೆಯಲು ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಬುಧವಾರ ವರದಿಯಾಗಿದೆ.
ಕಳೆದ ಮಂಗಳವಾರದಂದು ರಾತ್ರಿ 8 ಗಂಟೆಯ ಸುಮಾರಿಗೆ ಧಾರ್ಮಿಕ ಧ್ವಜದ ಕಂಬಕ್ಕೆ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಪೋಲಿಸರು ಮಧ್ಯಪ್ರವೇಶಿಸಿದ್ದರಿಂದ ಅನಾಹುತ ತಪ್ಪಿತ್ತು. ಆದಾಗ್ಯೂ, ಆ ದ್ವೇಷ ಮರುದಿನ ಬುಧವಾರದಂದು ಸ್ಫೋಟಗೊಂಡು ಉಭಯ ಗುಂಪುಗಳ ನಡುವಿನ ಮಾತಿನ ಚಕಮಕಿಯನ್ನು ತಡೆಯಲು ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದರು.
ಬೆಳಿಗ್ಗೆ ಆಕರ್ಷಕ ಮೆರವಣಿಗೆಯಲ್ಲಿ ಸಂತ್ ಸೇವಾಲಾಲ್ ಮಹಾರಾಜರ ಭಕ್ತರು ಆಪಾರ ಸಂಖ್ಯೆಯಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಂಜಾರಾ ಸಮಾಜದ ಕೆಲ ಯುವಕರು ಮೌಲಾನಾ ಅಬ್ದುಲ್ ಕಲಂ ಅಜಾದ್ ವೃತ್ತದಲ್ಲಿರುವ ಅಜಾದ್ ಧ್ವಜ ಸ್ತಂಭಕ್ಕೆ ಸೇವಾಲಾಲ್ ಭಾವುಟ ಕಟ್ಟಲು ಮುಂದಾದಾಗ ಕೆಲ ಮುಸ್ಲಿಂ ಯುವಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಎರಡು ಗುಂಪುಗಳ ನಡುವೆ ವಾಗ್ದಾದ ಉಂಟಾಯಿತು. ಆಗ ಪೋಲಿಸರು ಕ್ರೈಂ ಪಿಎಸ್ ಐ ದಿವ್ಯಾ ಮಹಾದೇವ್ ಅವರ ನೇತೃತ್ವದಲ್ಲಿ ಲಘು ಲಾಠಿ ಪ್ರಹಾರ ಮಾಡುವ ಮೂಲಕ ಉದ್ರಿಕ್ತ ಯುವಕರನ್ನು ಅಲ್ಲಿಂದ ಚದುರಿಸಿದರು.