ವಾಟ್ಸ್‌ ಆ್ಯಪ್ ಹ್ಯಾಕಿಂಗ್ ‌ ನೈಜೀರಿಯನ್‌ ಪ್ರಜೆ ಸೆರೆ

ಬೆಂಗಳೂರು,ನ.21-ವಾಟ್ಸ್‌ ಆ್ಯಪ್‌ ಹ್ಯಾಕ್‌ ಮಾಡಿ ಫೋರ್ಜರಿ ಮಾಡುತ್ತಾ ನಗರದಲ್ಲಿ ಅಡಗಿದ್ದ ನೈಜೀರಿಯನ್‌ ಪ್ರಜೆಯನ್ನು ದೆಹಲಿಯ ತಿಲಕ್‌ ಮಾರ್ಗ್‌ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯನ್‌ ದೇಶದ ಒಕ್ವುದಿರಿ ಪಾಸ್ಚಲ್
ಬಂಧಿತ ಆರೋಪಿಯಾಗಿದ್ದು ಆತನಿಂದ 7 ಮೊಬೈಲ್‌ಗಳು, 4 ಸಿಮ್‌ಗಳು, 8 ಎಟಿಎಂ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಪ್‌ಗ್ರೇಡ್ ಮಾಡುವ ಹೆಸರಿನ ವಾಟ್ಸ್‌ ಆ್ಯಪ್ ಹ್ಯಾಕ್ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದ ಕುರಿತು ರಂಗಲಾಲ್ ಜಮುದಾ ಎಂಬುವರು ಕಳೆದ ಅ.2 ರಂದು ದೆಹಲಿಯ ದೂರು ನೀಡಿದ್ದರು.
ತನಗೆ ವಾಟ್ಸ್‌ ಆ್ಯಪ್ ಅಪ್‌ಗ್ರೇಡ್ ಆಗುತ್ತಿದೆ ಎಂಬ ಸಂದೇಶ ಬಂದಿತ್ತು. ಇದಕ್ಕಾಗಿ 6 ಸಂಖ್ಯೆಯ ಒಟಿಪಿ ನೀಡಲಾಗಿತ್ತು. ಅವರು ತಮ್ಮ ವಾಟ್ಸ್‌ ಆ್ಯಪ್‌ನಲ್ಲಿ ಒಟಿಪಿ ನಮೂದಿಸುತ್ತಿದ್ದಂತೆಯೇ ವಾಟ್ಸ್‌ ಆ್ಯಪ್ ಹ್ಯಾಕ್ ಆಗಿದೆ. ಆ ಬಳಿಕ ಪರಿಚಿತರು, ಸಂಬಂಧಿಕರಿಗೆ ವಾಟ್ಸ್‌ ಆ್ಯಪ್‌ ನಂಬರ್‌ನಿಂದ ಮೆಸೇಜ್‌ ಮಾಡಿ ಹಣ ಕೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಾಣಸವಾಡಿಯ ಬ್ಯಾಂಕ್‌ನ ಎಟಿಎಂ ಬೂತ್‌ನಿಂದ ವಂಚಕ ಹಣ ಡ್ರಾ ಮಾಡುತ್ತಿರುವುದು ತಿಲಕ್ ಮಾರ್ಗ ಠಾಣೆ ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿತ್ತು.
ಇದಾದ ಬಳಿಕ ಪೊಲೀಸರ ತಂಡ ನಗರಕ್ಕೆ ಬಂದು ಎಟಿಎಂ ಬೂತ್‌ನಲ್ಲಿ ಹಣ ಡ್ರಾ ಮಾಡುತ್ತಿದ್ದಾಗ ವಂಚಕನನ್ನು ಹಿಡಿದಿದ್ದಾರೆ. ಆರೋಪಿಗಳು ವಾಟ್ಸ್‌ ಆ್ಯಪ್ ಹ್ಯಾಕ್ ಮಾಡಿದ ಬಳಿಕ ಸಂತ್ರಸ್ತರ ಮೊಬೈಲ್‌ಗಳ ಕಾಂಟ್ಯಾಕ್ಟ್ ಲಿಸ್ಟ್‌ ನಲ್ಲಿರುವವರಿಗೆ ತಮ್ಮ ಖಾತೆ ಸಂಖ್ಯೆಯನ್ನು ಕಳುಹಿಸಿ ಸಹಾಯದ ಹೆಸರಿನಲ್ಲಿ ವಂಚಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸಿ ಕೆಲವೊಮ್ಮೆ ಹರ್ಬಲ್ ಸೀಡ್ಸ್ ಹೆಸರಲ್ಲಿ ಮೋಸ ಮಾಡುತ್ತಿದ್ದರು.
ಈ ಗ್ಯಾಂಗ್‌ನಲ್ಲಿ ಸಾಕಷ್ಟು ಮಂದಿ ಭಾಗಿಯಾಗಿದ್ದು, ಪೊಲೀಸರು ದಾಳಿ ವೇಳೆ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ದೇಶಾದ್ಯಂತ ನೂರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.
ಸೈಬರ್ ದರೋಡೆಕೋರರು ಅಂತರಾಷ್ಟ್ರೀಯ ಗ್ಯಾಂಗ್ ಈ ಕೃತ್ಯವನ್ನು ನಡೆಸುತ್ತಿದ್ದು, ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.