‘ವಾಜಪೇಯಿ’ ಬಿಜೆಪಿಗೆ ಪ್ರೇರಣಾ ಶಕ್ತಿ: ಚಂದ್ರಶೇಖರ್ ರಾವ್

ಪುತ್ತೂರು, ಡಿ.೨೬- ವಿರೋಧ ಪಕ್ಷದಲ್ಲಿ ಕಡು ವೈರಿ ಇದ್ದರೂ ಅವರನ್ನು ಗೌರವಿಸುವ ಮನೋಭಾವ ಅಟಲ್ ಬಿಹಾರಿ ವಾಜಪೇಯಿ ಅವರದಾಗಿತ್ತು.  ಹಾಗಾಗಿ ಅವರು ಅಜಾತ ಶತ್ರುವಾಗಿ ಗುರುತಿಸಿಕೊಂಡರು. ಅವರ ನಡೆ ಬಿಜೆಪಿಗೆ ಪ್ರೇರಣಾ ಶಕ್ತಿಯಾಗಿತ್ತು ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಹೇಳಿದರು.

ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಮಂಡಲದಿಂದ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಜನಸಂಘದಿಂದ ಆರಂಭಗೊಂಡಾಗಿನಿಂದ ವಾಜಪೇಯಿ ಅವರು ತಳಮಟ್ಟದ ಕಾರ್ಯಕರ್ತರನ್ನು ಗೌರವಿಸುತ್ತಿದ್ದರು. ಕಾರ್ಯಕರ್ತರ ಕುರಿತು ಎಷ್ಟು ಪ್ರೀತಿ ಇತ್ತೆಂದರೆ ಗ್ವಾಲಿಯರ್‌ನಲ್ಲಿ ವಾಜಪೇಯಿ ಅವರು ಸೋತಾಗ ದು:ಖಿತರಾದ ಭದ್ರಾವತಿಯ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ತಿಳಿದ ವಾಜಪೇಯಿ ಕಾರ್ಯಕರ್ತರ ಮನೆ ಭೇಟಿ ಮಾಡುವ ಮೂಲಕ ರಾಷ್ಟ್ರಮಟ್ಟದ ನಾಯಕ ಸಾಮಾನ್ಯ ಕಾರ್ಯಕರ್ತನನ್ನು ಭೇಟಿ ಮಾಡುವ ಮೂಲಕ ಎಲ್ಲರಿಗೂ ರೋಲ್ ಮಾಡೆಲ್ ಆಗಿದ್ದರು. ಇದರ ಜೊತೆ ದೇಶವ್ಯಾಪಿ ಸುತ್ತಾಡಿದ ಅವರು ಪುತ್ತೂರಿಗೂ ಮೂರು ಬಾರಿ ಬಂದಿದ್ದರು ಎಂದರು. ಸಭೆಯಲ್ಲಿ ವಾಜಪೇಯಿ ಅವರ ಭಾವ ಚಿತ್ರಕ್ಕೆ ಪಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಮಾಜಿ ಕಾರ್ಯದರ್ಶಿ ರಾಮದ್‌ದಾಸ್ ಹಾರಾಡಿ, ನಗರಸಭಾ ಸದಸ್ಯರಾದ ಯಶೋಧಾ ಹರೀಶ್, ಮನೋಹರ್ ಕಲ್ಲಾರೆ, ತಾಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ರಮೇಶ್ ಭಟ್, ಗೋವರ್ಧನ್, ರಾಘವೇಂದ್ರ ಪ್ರಭು ಉಪಸ್ಥಿತರಿದ್ದರು.

ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು.