ವಾಜಪೇಯಿ ಜಯಂತಿ ಪ್ರಯುಕ್ತ ಬಿಜೆಪಿ ಓಬಿಸಿ ಮೋರ್ಚಾದಿಂದ ವಿವಿಧ ಕಾರ್ಯಕ್ರಮ

ಚಾಮರಾಜನಗರ, ಡಿ. 26-ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜಯಂತಿ ಅಂಗವಾಗಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ರೈತ ದಿನವನ್ನಾಗಿ ಘೋಷಣೆ, ಮೂವರು ರೈತರಿಗೆ ಸನ್ಮಾನ, ರಾಮಸಮುದ್ರ ಸಮೀಪ ಶ್ರೀ ಜನಾರ್ಧನಸ್ವಾಮಿ ದೇವಸ್ಥಾನದ ಅವರಣ ಸ್ವಚ್ಚತೆ ಹಾಗೂ ಪಾರ್ವತಿ ಬಾಲಾಶ್ರಮದ ಮಕ್ಕಳಿಗೆ ಒಂದು ದಿನಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಮೊದಲಿಗೆ ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀ ಪಾರ್ವತಿ ಬಾಲಾಶ್ರಮದ ಮಕ್ಕಳಿಗೆ ಉಪಾಹಾರ, ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಂತರ ನಗರ ಸಮೀಪದಲ್ಲಿರುವ ರಾಮಸಮುದ್ರದ ಶ್ರೀ ಜನಾರ್ಧನಸ್ವಾಮಿ ದೇವಸ್ಥಾನವ ಅವರಣವನ್ನು ಓಬಿಸಿ ಮೋರ್ಚಾ ಪದಾಧಿಕಾರಿಗಳು ಶ್ರಮದಾನದಿಂದ ಸ್ವಚ್ಚಗೊಳಿಸಿದರು. ನಂತರ ಪಕ್ಕದ ಹೊಲದಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದ ಮೂವರು ರೈತರನನ್ನು ಆಹ್ವಾನಿಸಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ಅಭಿನಂದಿಸಿ, ದೇಶಕ್ಕೆ ಅನ್ನ ನೀಡುವ ರೈತರೇ ನಮ್ಮ ದೇಶದ ಆಸ್ತಿ, ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ಕೂಗಿದರು.
ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಪ್ರಧಾನಕಾರ್ಯದರ್ಶಿ ಸುರೇಶ್ ಬಾಬು ಮಾತನಾಡಿ, ದೇಶದ ಹೆಮ್ಮೆ ಪ್ರಧಾನಿ ಅಜಾತ ಶತ್ರುವಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟಿ ಶುಭ ದಿನವಾಗಿದೆ. ವಾಜಪೇಯಿ ಅವರು ಕಾಂಗ್ರೆಸ್ ವಿರುದ್ದ ಹೋರಾಟ ಮಾಡಿ, ಬಿಜೆಪಿಯನ್ನು ಸದೃಢವಾಗಿ ಸಂಘಟನೆ ಮಾಡಿ, ಪ್ರಧಾನಿಯಾಗಿದ್ದರು. ದೇಶದ ರಸ್ತೆಗಳ ಅಭಿವೃದ್ದಿಗಾಗಿ ನೀಲ ನಕ್ಷೆಯನ್ನು ತಯಾರಿಸಿ, ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯನ್ನು ಜಾರಿ ಮಾಡಿ, ಹಳ್ಳಿಗಳ ರಸ್ತೆಯನ್ನು ಡಾಂಬರಿಕರಣಗೊಳಿಸಿದ ಪುಣ್ಯಾವಂತ, ಅವರ ಸ್ಮರಣೆಯನ್ನು ಮಾಡಿಕೊಳ್ಳುವ ಜೊತೆಗೆ ತತ್ವ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ನಟರಾಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ನಮ್ಮ ನೆಚ್ಚಿನ ನಾಯಕರಾದ ವಾಜಪೇಯಿ ಅವರ ಜಯಂತಿ ಕಾರ್ಯಕ್ರಮವನ್ನು ರೈತ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಅಲ್ಲದೇ ಇಂದು ಪ್ರಧಾನಿ ನರೇಂದ್ರಮೋದಿ ಅವರು ಕಿಸಾನ್ ಸನ್ಮಾನ್ ಯೋಜನೆಯಡಿಯಲ್ಲಿ ದೇಶದ ಲಕ್ಷಾಂತರ ಮಂದಿ ರೈತರ ಬ್ಯಾಂಕ್ ಖಾತೆ ತಲಾ 2 ಸಾವಿರ ರೂ.ಗಳಂತೆ 18 ಸಾವಿರ ಕೋಟಿ ರೂ.ಗಳನ್ನು ಹಾಕುವ ಮೂಲಕ ವಾಜಪೇಯಿ ಅವರ ಆಶಯವನ್ನು ಈಡೇರಿಸಿದ್ದಾರೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ. ಚಿನ್ನಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ಪರವಾದ ಯೋಜನೆಗಳನ್ನು ಜಾರಿ ಮಾಡಿದೆ.ಈಗ ಜಾರಿ ಮಾಡಿರುವ ಕೃಷಿ ಕಾಯ್ದೆ ತಿದ್ದುಪಡಿ ದೇಶದ ರೈತರಿಗೆ ವರದಾನವಾಗಿದೆ. ದಲ್ಲಾಳಿಗಳಿಲ್ಲದೇ ರೈತರು ನೇರವಾಗಿ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟಮಾಡಲು ಅವಕಾಶವಿದೆ. ಯುವಕರು ಕೃಷಿಯತ್ತ ಅಕರ್ಷಣೆಯಾಗಲು ಈ ಕಾಯದೆ ಸಹಕಾರಿಯಾಗಿದೆ. ವಿಪಕ್ಷಗಳು ಹಾಗೂ ಕೆಲವು ರೈತ ಸಂಘಟನೆಗಳ ಪ್ರತಿಭಟನೆಯಿಂದ ದೇಶದ ಆರ್ಥಿಕತೆ ಹಾಗೂ ರೈತ ಬದುಕಿನಲ್ಲಿ ಕೆಟ್ಟ ಪರಿಣಾಮ ಬೀಳಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಂ. ಚಿನ್ನಸ್ವಾಮಿ, ಉಮೇಶ್, ಕೇಂದ್ರ ಬರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷೆ ಮಂಗಳಮ್ಮ, ಕೋಶಾಧ್ಯಕ್ಷೆ ದ್ರುವಕುಮಾರಿ, ನಗರ ಘಟಕದ ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವುರಾಮಸಮುದ್ರ, ನಗರ ಮಂಡಲದ ಅಧ್ಯಕ್ಷ ಎಸ್. ನಂದೀಶ್ ವಿಶ್ವಕರ್ಮ, ಉಪಾಧ್ಯಕ್ಷ ಕೃಷ್ಣ, ನಾಗರಾಜು, ರುದ್ರ, ಕಾರ್ಯದರ್ಶಿ ವಿನಯ್, ಪುರುಷೋತ್ತಮ್, ಕೋಶಾಧ್ಯಕ್ಷ ಶ್ರೀಕಾಂತ್, ರವಿ, ಕಾರ್ಯಕಾರಿಣಿ ಸದಸ್ಯರಾದ ಸ್ವಾಮಿ, ಸುರೇಶ್, ಮಹೇಂದ್ರ, ಅಭಿ, ಯೋಗೇಂದ್ರ, ಮರಿಸ್ವಾಮಿಗೌಡ, ಚಿನ್ನಸ್ವಾಮಿ ಮೊದಲಾದವರು ಇದ್ದರು.