ವಾಜಪೇಯಿ ಗ್ರಂಥಾಲಯ ಉದ್ಘಾಟನೆ

ಕೆಆರ್ ಪುರ,ಡಿ.೨೬- ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬದ ಅಂಗವಾಗಿ ವಿಜಿನಾಪುರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಗ್ರಂಥಾಲಯವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ಮಾಜಿ ಪಾಲಿಕೆ ಸದಸ್ಯ ಬಂಡೆ ಎಸ್ ರಾಜ ಉದ್ಘಾಟಿಸಿದರು.
ನಂತರ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿರವರು, ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ದೇಶಕ್ಕೆ ಅವರ ಕೊಡುಗೆ ಅಪಾರ, ಅವರ ಹೆಸರಿನಲ್ಲಿ ವಿಜಿನಾಪುರದಲ್ಲಿ ಗ್ರಂಥಾಲಯ ಮರು ನಿರ್ಮಾಣ ಮಾಡಿರುವುದು ಸಂತಸ ತಂದಿದೆ.
ಈ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪುಸ್ತಕಗಳು ಸೇರಿದಂತೆ ಕಥೆ ಕಾದಂಬರಿ ಪುಸ್ತಕಗಳಿವೆ.
ವಿಜಿನಾಪುರದ ಗ್ರಾಮಸ್ಥರು ಹಾಗೂ ಯುವ ಪೀಳಿಗೆ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಲಡ್ಡುಗಳನ್ನು ವಿತರಣೆ ಮಾಡುವ ಮೂಲಕ ವಾಜಪೇಯಿರವರ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಬಂಡೆ ಎಸ್ ರಾಜ, ಮುಖಂಡರಾದ ಹೊರಮಾವು ರಾಮಚಂದ್ರ, ಎಸ್. ಪ್ರಕಾಶ್, ನವೀನ್ ಅರಸು, ಮತ್ತಿತರರು ಹಾಜರಿದ್ದರು.