ವಾಚ್ ಮ್ಯಾನ್ ಸಾವು;ಕುಟುಂಬಸ್ಥರ ಪ್ರತಿಭಟನೆ, ಪೊಲೀಸರ ಮಧ್ಯಸ್ತಿಕೆಯಲ್ಲಿ ಸುಖಾಂತ್ಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.1 :-  ” ಅವಾದ ” ಸೋಲಾರ್ ಪ್ಲಾಂಟ್ ನಲ್ಲಿ  ವಾಚ್ ಮ್ಯಾನ್ ಕರ್ತವ್ಯದಲ್ಲಿದ್ದ ವ್ಯಕ್ತಿಯೊರ್ವ  ಭಾನುವಾರ ನಸುಕಿನ ಜಾವ ಮೃತಪಟ್ಟ ಹಿನ್ನಲೆಯಲ್ಲಿ ಮೃತನಾದ  ಬಗ್ಗೆ ಆತನ  ಕುಟುಂಬಕ್ಕೆ ತಿಳಿಸದೇ ಇದ್ದುದರಿಂದ ಕಂಪನಿ ವಿರುದ್ಧ ಆಕ್ರೋಶಗೊಂಡ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಮೃತ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು  ಪ್ಲಾಂಟ್  ಮುಂದೆ ಆತನ ಶವವಿಟ್ಟು  ಭಾನುವಾರ ರಾತ್ರಿ  ಪ್ರತಿಭಟನೆ ನಡೆಸಿದರು ನಂತರ ಕಳೆದ ರಾತ್ರಿ ಪೊಲೀಸರ ಮದ್ಯಸ್ತಿಕೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದರಿಂದ ಸುಖಾಂತ್ಯ ಕಂಡಿತು.
ಪೂಜಾರಹಳ್ಳಿ ಗ್ರಾಮದ ತಾತಯ್ಯ(42) ಮೃತ ವಾಚ್ ಮ್ಯಾನ್, ಶನಿವಾರ ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿದ್ದು ಭಾನುವಾರ ಬೆಳಿಗ್ಗೆ  ಮನೆಗೆ ಬಾರದೆ ಇದ್ದು, ಹೋಗಿ ನೋಡಿದಾಗ ಎಂಸಿಆರ್ ರೂಂನಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದಿದ್ದು ಗಂಡ ಮೃತಪಟ್ಟಿರುವ ಬಗ್ಗೆ ಕುಟುಂಬಕ್ಕೆ ಏಕೆ ತಿಳಿಸಲಿಲ್ಲ ಎಂದು ಆಕ್ರೋಶಗೊಂಡ ಮೃತನ ಪತ್ನಿ ವಿಶಾಲಾಕ್ಷಿ ನನ್ನ ಗಂಡನ‌ ಸಾವಿನ ಬಗ್ಗೆ ಅನುಮಾನವಿದೆ ಎಂದು  ಹೊಸಹಳ್ಳಿ ಪೊಲೀಸ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ಸಹ ದಾಖಲಾಗಿತ್ತು .
ಪರಿಹಾರ ನೀಡುವಂತೆ ಪ್ಲಾಂಟ್ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು :  ಹೊರವಲಯದ ಅವಾದ ಸೋಲಾರ್ ಪ್ಲಾಂಟ್ ಬಳಿ ಮೃತ ತಾತಯ್ಯನ ಶವವಿಟ್ಟು ಹತ್ತು ಲಕ್ಷ ರೂ ಪರಿಹಾರ ನೀಡಬೇಕು, ಮೃತ ಪತ್ನಿಗೆ ಕಂಪನಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕು, ಮೃತನ  ಪತ್ನಿಗೆ ಪ್ರತಿ ತಿಂಗಳು ಹತ್ತು ಸಾವಿರ ರೂ ಪಿಂಚಣಿ ನೀಡಬೇಕು, ಪಿಎಫ್ ಹಣವನ್ನು ಕೊಡುವ ಬಗ್ಗೆ  ಕುಟುಂಬದವರು ಹಾಗೂ ಗ್ರಾಮಸ್ಥರು ಮೃತ ತಾತಯ್ಯ ಅವರ ಶವವಿಟ್ಟು, ಕಂಪನಿಯವ ಮುಖ್ಯಸ್ಥರು ಸ್ಥಳಕ್ಕೆ ಬರಬೇಕು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿಭಟನೆ ಮಾಡುವ ಮೂಲಕ  ಒತ್ತಾಯಿಸಿದರು.
ಮೃತ ತಾತಯ್ಯಾನಿಗೆ ಇಬ್ಬರು ಚಿಕ್ಕ ಹೆಣ್ಣು ಮಕ್ಕಳಿದ್ದು ಅವರ ಕುಟುಂಬ ಬೀದಿಗೆ ಬಂದಿದೆ ಎಂದು ಕುಟುಂಬದ ಕಣ್ಣೀರಿನ ಗೋಳು ಮುಗಿಲು ಮುಟ್ಟಿತ್ತು ನಂತರ  ಆ  ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಬೇಕಿದೆ ಅಲ್ಲದೆ  ಮುಂದೆ ಇದೇ ರೀತಿಯಾಗಿ ಬೇರೆ ಸಿಬ್ಬಂದಿಗೆ ಏನಾದರು ಆದರೆ ಯಾರು ಜವಾಬ್ದಾರರು  ಎಂದು ರಾತ್ರಿಯಾದರೂ ಕತ್ತಲಲ್ಲೇ ಕುಳಿತ ಗ್ರಾಮಸ್ಥರು  ಪ್ರತಿಭಟನೆಯಲ್ಲಿ ಕಂಪನಿ ವಿರುದ್ಧ  ದೂರಿದರು.
ಪೊಲೀಸರ ಮದ್ಯಸ್ತಿಕೆಯಲ್ಲಿ ಪೂಜಾರಹಳ್ಳಿ ಸಮೀಪದ ಅವಾದ ಸೋಲಾರ್ ಪ್ಲಾಂಟ್ ನ  ಮ್ಯಾನೇಜರ್ ಸತೀಶ್ ಅವರು, ಮೃತ ಕುಟುಂಬಕ್ಕೆ ಕಂಪನಿಯಿಂದ  ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ನಂತರ  ಭಾನುವಾರ ರಾತ್ರಿ 9ಗಂಟೆ ಸುಮಾರಿಗೆ ಪ್ರತಿಭಟನೆಯನ್ನು ಗ್ರಾಮಸ್ಥರು ಹಿಂಪಡೆದರು ಹಾಗೂ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದು ಇಂದು ಮೃತ ತಾತಯ್ಯನ  ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ,ಪಿಎಸ್ಐ ನಾಗರತ್ನಮ್ಮ, ಕೂಡ್ಲಿಗಿಯ ಪಿಎಸ್ಐ ಧನುಂಜಯ ಹಾಗೂ  ಪೊಲೀಸ್  ಸಿಬ್ಬಂದಿಗಳಾದ  ಜಗದೀಶ್, ಸಂದೀಪ್, ಹಾಲೇಶ್, ಪ್ರಭು,ಅಂಜಿನಪ್ಪ, ಮಂಜುನಾಥ, ಹಂಪಣ್ಣ, ಬಸವರಾಜ್ ಇತರರಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸದರು.