ವಾಕಥಾನ್‍ಗೆ ಚಾಲನೆ


ಹುಬ್ಬಳ್ಳಿ, ಮಾ30 : ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಮತದಾನ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹುಬ್ಬಳ್ಳಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ರಾಮಚಂದ್ರ ಹೊಸಮನಿ ಹೇಳಿದರು.
ತಾಲೂಕು ಆಡಳಿತಸೌಧದಲ್ಲಿ ತಾಲೂಕು ಪಂಚಾಯತಿ ವತಿಯಿಂದ ಆಯೋಜಿಸಲಾಗಿದ್ದ ವಾಕ್ ಥಾನ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕಿದೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ತಮ್ಮ ಹಕ್ಕನ್ನು ಸರಿಯಾದ ವ್ಯಕ್ತಿಗೆ ಚಲಾಯಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. 18 ವರ್ಷ ಪೂರ್ಣಗೊಂಡವರು ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಚನ್ನಮ್ಮ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಸದಾನಂದ ಅಮರಾಪುರ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ತಾಲೂಕು ಆಡಳಿತಸೌಧದಿಂದ ಚನ್ನಮ್ಮ ವೃತ್ತದವರೆಗೆ ವಾಕ್‍ಥಾನ್ ರ್ಯಾಲಿ ನಡೆಯಿತು. ರ್ಯಾಲಿಯುದ್ದಕ್ಕೂ ಮತದಾನದ ಕುರಿತ ಘೋಷಣೆಗಳನ್ನು ಕೂಗಲಾಯಿತು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಡಾ.ಸಂಗಮೇಶ ಬಂಗಾರಿಮಠ, ಚಂದ್ರಶೇಖರ ಕುರ್ತಕೋಟಿ, ಶಿವಾನಂದ ನಸಬಿ, ತಾಲೂಕು ಎಂ.ಆರ್.ಡಬ್ಲೂ ಮಹಾಂತೇಶ ಕುರ್ತಕೋಟಿ, ರಮೇಶ ಲಮಾಣಿ ಸೇರಿದಂತೆ ತಾಲೂಕು ಪಂಚಾಯತ ಸಿಬ್ಬಂದಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಇತರರು ಭಾಗವಹಿಸಿದ್ದರು.