ವಾಂತಿ-ಭೇದಿ ಪ್ರಕರಣ:ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ

ಸಂಜೆವಾಣಿ ವಾರ್ತೆಹೊಸಪೇಟೆ ಆ12: ನಗರದ ಸರ್ಕಾರಿ ಮೆಟ್ರಿಕ್ ನಂತರದ ಎಸ್ಟಿ ಬಾಲಕಿಯರ ವಸತಿ ನಿಯಲದಲ್ಲಿ ವಿಷಾಹಾರ ಹಾಗೂ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜತೆಗೆ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಎಸ್‍ಎಫ್‍ಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್‍ಗೆ ಮನವಿ ಸಲ್ಲಿಸಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಸ್ವಚ್ಛತೆಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ- ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ವಾರ್ಡನ್ ಮತ್ತು ಕಾವಲುಗಾರರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.ಹಾಸ್ಟೆಲ್‍ನ ವಿದ್ಯಾರ್ಥಿನಿಯರಿಗೆ ಮುಂಜಾಗ್ರತಾ ಕ್ರಮವಾಗಿ ತಲಾ ಒಂದು ಪ್ರಥಮ ಚಿಕತ್ಸೆ ಕಿಟ್ ವಿತರಿಸಬೇಕು. ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಹಾಸಿಗೆ ಮತ್ತು ಹೊದಿಕೆಗಳನ್ನು ಒದಗಿಸಬೇಕು. 150 ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‍ನಲ್ಲಿ 8 ಶೌಚಾಲಯ ಮತ್ತು ಸ್ನಾನ ಕೊಠಡಿಗಳಿದ್ದು, ಅವುಗಳಲ್ಲಿ ತಲಾ ಎರಡು ಬಳಕೆಗೆ ಯೋಗ್ಯವಾಗಿಲ್ಲ. ಅವುಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.ಎಸ್‍ಎಫ್‍ಐ ತಾಲೂಕು ಸಂಚಾಲಕ ಪವನ್ ಕುಮಾರ್, ಮರಡಿ ಜಂಬಯ್ಯ ನಾಯಕ, ಬಿಸಾಟಿ ತಾಯಪ್ಪ ನಾಯಕ, ಮಣಿಕಂಠ, ಶಿವರಡ್ಡಿ, ಸುಧಾಕರ, ಅಖಿಲ ಭಾರತ ಜನವಾದಿ ಸಂಘಟನೆ ಗೌರವಾಧ್ಯಕ್ಷೆ ಕೆ.ನಾಗರತ್ನ, ಅಂಗನವಾಡಿ ನೌಕರರ ಸಂಘದ ಜಿ.ಶಕುಂತಲಾ, ಸಿಐಟಿಯು ತಾಲೂಕು ಸಂಚಾಲಕ ಕೆ.ಎಂ.ಪ್ರಸನ್ನ, ಹೊಸಪೇಟೆ ಹಮಾಲಿ ಸಂಘದ ಅಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ, ಆಟೋ ಚಾಲಕರ ಸಂಘದ ಕೆ.ಎಂ.ಸಂತೋಷ, ಡಿವೈಎಫ್‍ಐ ಇ. ಮಂಜುನಾಥ ಮತ್ತಿತರರಿದ್ದರು. ಸ್ಥಳಕ್ಕೆ ಶಾಸಕರ ಪುತ್ರ ಎಚ್.ಆರ್. ಗುರುದತ್ ಕೂಡ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಕಾಂಗ್ರೆಸ್ ಮುಖಂಡರಾದ ಗುಜ್ಜಲ ನಿಂಗಪ್ಪ, ಕೆ. ರವಿಕುಮಾರ ಇತರರು ಹಾಜರಿದ್ದರು.
One attachment • Scanned by Gmail