ವಾಂತಿ ಬೇಧಿ: ಬಾಲಕಿ ಸಾವು

ಸಿರವಾರ,ಆ.೦೪- ಪಟ್ಟಣದ ಕುರುಬರ ಓಣಿ, ವಾರ್ಡ್ ನಂ೧೬ ರಲ್ಲಿ ಗುರುವಾರ ರಾತ್ರಿ ವಾಂತಿ ಬೇಧಿಯಿಂದ ಮಗು ಮೃತಪಟ್ಟ ಘಟನೆ ಜರುಗಿದೆ.
ಈರೇಶ ಬಿಚ್ವಾಲಿ ಎಂಬುವವರ ಮಗಳಾದ ಸಿಂಚನಾ(೬) ವಾಂತಿ ಬೇಧಿಯಿಂದ ಮೃತಪಟ್ಟ ದುರ್ದೈವಿ ಬಾಲಕಿ.
ಗುರುವಾರ ರಾತ್ರಿ ಏಕಾಏಕಿ ಎರಡು ಬಾರಿ ವಾಂತಿ ಬೇಧಿ ಆಗಿದ್ದು, ಮಗುವಿನ ತಾಯಿ ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರ ಮನೆ ಬಳಿಗೆ ಕರೆದೊಯ್ದಿದ್ದಾರೆ. ಮನೆಯಲ್ಲಿ ವೈದ್ಯರು ಇಲ್ಲ ಎಂದು ಕುಟುಂಬದವರು ಹೇಳಿದ್ದರಿಂದ ಗಾಬರಿಗೊಂಡ ತಾಯಿ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗುವಿನ ಜೀವ ಹೋಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದ್ದೂ ಇಲ್ಲವಾದ ಸರ್ಕಾರಿ ಆಸ್ಪತ್ರೆ; ಸರಕಾರಗಳು ಆಸ್ಪತ್ರೆ ಗಳಿಗಾಗಿ ಕೋಟ್ಯಂತರ ರೂ.ಗಳ ಅನುದಾನವನ್ನು, ಔಷಧಿಗಳನ್ನು, ಒದಗಿದ್ದರೂ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ, ಸಂಜೆಯಾದರೆ ಸಾಕು ಆಸ್ಪತ್ರೆಯಲ್ಲಿ ಯಾರೂ ಸಿಗುವುದಿಲ್ಲ.ಚಿಕಿತ್ಸೆ ದೂರದ ಮಾತು. ಬಡ ಜನರಿಗೆ ಚಿಕಿತ್ಸೆ ದೊರೆಯದ ಇಂತಹ ಹಲವಾರು ಘಟನೆಗಳು ಜರುಗುತ್ತಿವೆ. ಸಂಬಂಧಿಸಿದ ಆರೋಗ್ಯಾಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.