ವಾಂತಿಭೇದಿ ನಿಯಂತ್ರಣಕ್ಕೆ ಕೈಗಳ ಶುಚಿತ್ವ, ಪರಿಸರ ನೈರ್ಮಲ್ಯ ಅವಶ್ಯಕ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೧೦; ವಾಂತಿಭೇದಿ ನಿಯಂತ್ರಣಕ್ಕೆ ಕೈಗಳ ಶುಚಿತ್ವ, ಬಿಸಿ ಆಹಾರ, ಶುದ್ಧ ಕುಡಿಯುವ ನೀರು, ಪರಿಸರ ನೈರ್ಮಲ್ಯ ಅವಶ್ಯಕ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಸಹಯೋಗದೊಂದಿಗೆ  ಚಿತ್ರದುರ್ಗದ ಕವಾಡಿಗರಹಟ್ಟಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುತ್ತಮುತ್ತಲಿನ ಶಾಲೆಗಳ ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ವಾಂತಿಬೇದಿ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಹಿಸಲು ಪರಿಸರ ಸ್ವಚ್ಛತೆ ಸಾಬೂನುನಿಂದ ಕೈ ತೊಳೆಯುವ ವಿಧಾನ ಶೌಚಾಲಯ ಬಳಕೆ, ಶುದ್ಧ ಕುಡಿಯುವ ನೀರಿನ ಬಳಕೆ ತರಬೇತಿ ಕಾರ್ಯಗಾರ ಹಮ್ಮಿಕೊಂಡು ಅವರು ಮಾತನಾಡಿದರು.ಪರಿಸರ ಸ್ವಚ್ಛತೆ, ಕೈಗಳನ್ನು ಸಾಬೂನುನಿಂದ ಕೈಗಳನ್ನ ತೊಳೆದುಕೊಳ್ಳುವುದು, ಕಾಯಿಸಿ ಆರಿಸಿದ ನೀರಿನ ಬಳಕೆ, ಶುದ್ಧ ಕುಡಿಯುವ ನೀರಿನ ಬಳಕೆ, ಮೆದು ಆಹಾರಗಳನ್ನು ಸೇವಿಸುವುದು, ಬಯಲು ಮಲವಿಸರ್ಜನೆಯನ್ನ ನಿಯಂತ್ರಿಸಿ, ಶೌಚಾಲಯ ಬಳಕೆ ಮಾಡುವಂತೆ ತಿಳಿಸಿದರು.ತಾಲೂಕ್ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಅತಿಸಾರ ಭೇದಿ ನಿಯಂತ್ರಣದಲ್ಲಿ ಕೈಗಳನ್ನು ಸಾಬೂನಿನಿಂದ ಪದೇ ಪದೇ ತೊಳೆದುಕೊಳ್ಳುವುದು. ತೆಳುವಾದ ಆಹಾರ ಪದಾರ್ಥನ ಬಿಸಿಬಿಸಿಯಾಗಿ ಸೇವಿಸುವುದು. ಗಂಜಿ ಹಾಲು ಶುದ್ಧವಾದ ಹಣ್ಣಿನ ಪಾನಕ ಮಜ್ಜಿಗೆ ಸೇವಿಸಬೇಕು. ಅತಿಯಾದ ಖಾರ ಮತ್ತು ಮಸಾಲೆ ಪದಾರ್ಥವನ್ನು ಸೇವಿಸಬಾರದು. ತೆರೆದು ಮಾರುವ ಹಣ್ಣುಗಳು ತಿಂಡಿ ತಿನಿಸುಗಳನ್ನ ತಿನ್ನಬಾರದು. ನೊಣಗಳ ನಿಯಂತ್ರಣ ಬಹು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದರು.ನಗರಸಭೆಯ ಸಹಕಾರದಿಂದ ನೊಣಗಳ ನಿಯಂತ್ರಣಕ್ಕಾಗಿ ಔಷಧಗಳನ್ನು ಸಿಂಪಡಣೆ ಮಾಡಲಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಲಿದೆ. ತರಬೇತಿಯನ್ನು ಪಡೆದುಕೊಂಡಂತಹ ಶಿಕ್ಷಕರು ಪ್ರತಿನಿತ್ಯ ತಮ್ಮ ಶಾಲೆಯಲ್ಲಿ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಕೈ ತೊಳೆಯುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ನೀಡಬೇಕು. ಪುನ: ಪುನಃ ಅಭ್ಯಾಸ ನಡೆಸಿದಾಗ ನಿರಂತರ ಅಭ್ಯಾಸವಾಗಿ ಬಿಡುತ್ತದೆ. ಶಾಲೆಯ ಶೌಚಾಲಯಗಳಲ್ಲಿ ಹೇರಳವಾಗಿ ನೀರು ಕೈ ತೊಳೆಯಲು ಸಾಬೂನು ವ್ಯವಸ್ಥೆ ಕಲ್ಪಿಸಿಕೊಳ್ಳಿ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ತರಬೇತಿಯಲ್ಲಿ ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಅಲ್ಲಲ್ಲಿ ಗುಂಪು ಸಭೆಗಳನ್ನು ನಡೆಸಿ ಮುಂಜಾಗ್ರತಾ ಕ್ರಮದ ಮಾಹಿತಿ ಕರಪತ್ರಗಳನ್ನೂ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ರಂಗಾರೆಡ್ಡಿ, ಮುಖ್ಯ ಶಿಕ್ಷಕ ಟಿ. ರುದ್ರಪ್ಪ, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಭಾಗವಹಿಸಿದ್ದರು.