ವಸ್ತ್ರ ಸಂಹಿತೆ ಜಾರಿ-ಸಂಭ್ರಮ

ಸಂಜೆವಾಣಿ ನ್ಯೂಸ್
ಮೈಸೂರು: ಜ.17:- ರಾಜ್ಯದ ದೇವಸ್ಥಾನಗಳಲ್ಲಿ ರಾಜ್ಯ ಸರ್ಕಾರ ವಸ್ತ್ರ ಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸರ್ವ ಅರ್ಜತೆ ಫೌಂಡೇಷನ್ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ವೇಳೆ ಫೌಂಡೇಷನ್ ಅಧ್ಯಕ್ಷೆ ಪದ್ಮ ಆರ್.ಗೌಡ ಮಾತನಾಡಿ, ದೇವಸ್ಥಾನ ಪವಿತ್ರ ಸ್ಥಳ. ಇಲ್ಲಿಗೆ ಮನಸ್ಸಿಗೆ ಬಂದಂತೆ ಬರಲು ಆಗುವುದಿಲ್ಲ. ನಾವು ಉಡುಗೆ ತೊಡುಗೆ ಉತ್ತಮವಾಗಿರಬೇಕು. ಈ ಕಾರಣಕ್ಕಾಗಿಯೇ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆ ಜಾರಿಗೊಳಿಸಬೇಕೆಂದು 2022ರ ಡಿ.22ರಿಂದ 27ರವರೆಗೆ ಚಾಮುಂಡಿಬೆಟ್ಟದಲ್ಲಿ ಅಭಿಯಾನ ನಡೆಸಿ ಅರಿವು ಮೂಡಿಸಲಾಗಿತ್ತು. ಅಲ್ಲದೇ, ದೇವಾಲಯಕ್ಕೆ ಬರುವ ಭಕ್ತರು ವಸ್ತ್ರಸಂಹಿತೆ ಪಾಲಿಸಿ ನಮ್ಮ ಸಂಸ್ಕೃತಿಯ ಉಡುಗೆ ತೊಟ್ಟು ದೇವರ ದರ್ಶನ ಬರಬೇಕು ಎಂದು ಅರಿವು ಮೂಡಿಸಲಾಗಿತ್ತು. ಈ ಕುರಿತು ಸರಕಾರಕ್ಕೂ ನಮ್ಮ ಸಂಸ್ಥೆಯಿಂದ ಮನವಿ ಮಾಡಲಾಗಿತ್ತು ಎಂದರು.
ರಾಜ್ಯ ಸರಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ದೇವಾಲಯಗಳಿಗೆ ಸಾಂಸ್ಕೃತಿಕ ಉಡುಗೆ-ತೊಡುಗೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ನಮ್ಮ ಹೋರಾಟಕ್ಕೆ ಸಂದ ಜಯ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸರ್ವ ಅರ್ಜತೆ ಫೌಂಡೇಷನ್ ಸದಸ್ಯರು ಇದ್ದರು.