ವಸ್ತು ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ


ಸಂಜೆವಾಣಿ ವಾರ್ತೆ
ಸಂಡೂರು:ಫೆ: 28: ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳ ವಸ್ತು ಪ್ರದರ್ಶನ ನೋಡುಗರನ್ನು ಅಕರ್ಷಿಸಿತು.  
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪನ್ಯಾಸಕ ತೋಟಪ್ಪಯ್ಯನವರು ಮಾತನಾಡಿ  ‘ವಿಜ್ಞಾನ ಮತ್ತಿತರ ವಿಷಯಗಳ ವಸ್ತುಪ್ರದರ್ಶನ ವಿದ್ಯಾರ್ಥಿಗಳಲ್ಲಿನ ಸೃಜನಾತ್ಮಕತೆಯನ್ನು ಹೊರ ತರಲು ಅವಕಾಶ ನೀಡುತ್ತದೆ. ಮಾದರಿ ತಯಾರಿಕೆಯಲ್ಲಿ ವಿದ್ಯಾರ್ಥಿಗಳು ಸ್ವತ: ತಮ್ಮನ್ನು ತೊಡಗಿಸಿಕೊಳ್ಳುವುದರಿಂದ, ಅವರಲ್ಲಿ ಆಸಕ್ತಿ ಹೆಚ್ಚುವುದಲ್ಲದೆ, ಅವರ ಕಲಿಕೆ ಪರಿಣಾಮಕಾರಿಯಾಗುವುದಲ್ಲದೆ, ದೃಢವಾಗುತ್ತದೆ’ ಎಂದರಲ್ಲದೆ, ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.  
ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜ್ಞಾನ, ಗಣಿತ ಸೇರಿದಂತೆ ವಿವಿಧ ವಿಷಯಗಳ  ಮಾದರಿಗಳಾದ ಜ್ಞಾಲಾಮುಖಿ, ಬೆಂಕಿ ನಂದಿಸುವ ಕ್ರಮ, ಡಯಾಲಿಸಿಸ್ ಕ್ರಮ, ಓಜೋನ್ ಪದರಕ್ಕೆ ಉಂಟಾಗುತ್ತಿರುವ ತೊಂದರೆ ಹಾಗೂ ಅದರ ಪರಿಣಾಮ,  ಅರಣ್ಯದ ಮಹತ್ವ, ಹೆಲ್ಮೆಟ್ ಇದ್ದರೆ ಮಾತ್ರ ವಾಹನ ಆರಂಭವಾಗುವುದು, ಸೋಲಾರ್ ವಿದ್ಯುತ್ ಉತ್ಪದನೆ, ಔಷಧಿ ಸಸ್ಯಗಳು, ಮೆಹರೋಲಿಯಲ್ಲಿನ ಕಬ್ಬಿಣದ ಸ್ತಂಭ, ವಿವಿಧ ಖನಿಜಗಳ ಲಭ್ಯತೆ, ಉಪಯೋಗ, ಸೌರ ಮಂಡಲ, ಕನ್ನಡ, ಹಿಂದಿ, ಇಂಗ್ಲಿಷ್ ವಿಷಯಗಳಲ್ಲಿನ ವ್ಯಾಕರಣ, ಪದಬಂಧ, ಒಗಟು ಬಿಡಿಸುವ ಕ್ರಮ, ಗಣಿತದ ಮಾದರಿಗಳು ನೋಡುಗರನ್ನು ಆಕರ್ಷಿಸಿದವು.  ವಿದ್ಯಾರ್ಥಿಗಳ ಪಾಲಕರು ಸಹ ತಮ್ಮ ಮಕ್ಕಳು ಪ್ರದರ್ಶಿಸಿದ ವಿವಿಧ ಮಾದರಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶಾಲೆಯ ಆಡಳಿತ ಮಂಡಳಿಯ ವ್ಯವಸ್ಥಾಪಕಿ ಸಿಸ್ಟರ್ ಸಿಸಿಲಿಯಾ ಫೆಲಿಕ್ಸ್, ಮುಖ್ಯ ಶಿಕ್ಷಕಿ ಅಂತೋನಿ ಮೇರಿ, ಸಿಸ್ಟರ್ ಸಹನಾ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಡೂರಿನ ಕೃಪಾನಿಲಯ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಮುಖ್ಯ ಅತಿಥಿಗಳು ವೀಕ್ಷಿಸಿದರು.