ವಸ್ತುಪ್ರದರ್ಶನ ಮಳಿಗೆಗಳಿಗೆ ಜನರ ದಂಡು: ಯೋಜನೆಗಳ ಅರಿವು

ಚಿತ್ರದುರ್ಗ ಮಾ. 5: ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಜನರು ತಂಡೋಪತಂಡವಾಗಿ ಇದೇ ಆವರಣದಲ್ಲಿ ವಿವಿಧ ಇಲಾಖೆಗಳ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದರು.  ಫಲಾನುಭವಿಗಳ ಸಮ್ಮೇಳನಕ್ಕಾಗಿ ಬೆಳಿಗ್ಗೆಯಿಂದಲೇ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದತ್ತ ಹರಿದು ಬಂದ ಜನಸಾಗರ, ಸಮಾರಂಭ ಪ್ರಾರಂಭವಾಗುವುದಕ್ಕೂ ಮುನ್ನ, ಇದೇ ಮೈದಾನದಲ್ಲಿ ವಿವಿಧ ಇಲಾಖೆಗಳು ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ತೆರೆದಿದ್ದ ವಸ್ತು ಪ್ರದರ್ಶನ ಮಳಿಗೆಯತ್ತ ಮುಖಮಾಡಿದರು.  ಹಲವು ಇಲಾಖೆಗಳ ವಸ್ತುಪ್ರದರ್ಶನ ಮಳಿಗೆಗಳಲ್ಲೂ ಜನಸಂದಣಿ ಕಂಡುಬಂದಿತು. ಅದರಲ್ಲೂ ಪ್ರಮುಖವಾಗಿ ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಸುಮಾರು 10 ಕ್ಕೂ ಹೆಚ್ಚು ಮಳಿಗೆಗಳನ್ನು ಒದಗಿಸಲಾಗಿತ್ತು.  ಜಿಲ್ಲೆಯ ವಿವಿಧ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿರುವ ತಿಂಡಿ ತಿನಿಸುಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ- ಸರಸ್ ಮೇಳವನ್ನು ವೀಕ್ಷಿಸಿದ ಜನರು, ಆಕರ್ಷಕ ಉತ್ಪನ್ನಗಳ ಖರೀದಿಯನ್ನೂ ಮಾಡಿದರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಉದ್ಯೋಗಖಾತ್ರಿ ಕುರಿತು ವಸ್ತುಪ್ರದರ್ಶನ ಆಯೋಜಿಸಿದರೆ, ಆರೋಗ್ಯ ಇಲಾಖೆಯು ಇದೇ ಸಂದರ್ಭದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್‍ಗಾಗಿ ಫಲಾನುಭವಿಗಳ ನೊಂದಣಿಗೆ ಹಾಗೂ ಉಚಿತವಾಗಿ ಜನರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿತ್ತು.  ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಸುವ ಪ್ರಾತ್ಯಕ್ಷಿಕೆ ಮಾದರಿ, ತೋಟಗಾರಿಕೆ ಇಲಾಖೆ, ಕೃಷಿ, ಮೀನುಗಾರಿಕೆ, ಸಮಾಜ ಕಲ್ಯಾಣ, ಪಶುಸಂಗೋಪನೆ, ಕೈಗಾರಿಕೆ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳು ಕೂಡ ವಸ್ತುಪ್ರದರ್ಶನ ಏರ್ಪಡಿಸುವ ಮೂಲಕ ಆಯಾ ಇಲಾಖೆಯ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ಸು ಕಂಡವು.  ಸಾವಿರಾರು ಜನ ವಸ್ತುಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.  ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಇದೇ ವಸ್ತುಪ್ರದರ್ಶನ ಮಳಿಗೆಗಳ ಬಳಿ, ವಿವಿಧ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಉಚಿತವಾಗಿ ತ್ರಿಚಕ್ರ ಮೋಟಾರು ವಾಹನಗಳ ವಿತರಣೆಯೂ ನೆರವೇರಿತು.