ವಸ್ತುಗಳ ಖರೀದಿಯಲ್ಲಿ ಗುಣಮಟ್ಟ ಪರಿಶೀಲನೆ ಅಗತ್ಯ : ಡಿಸಿ

ಬಾಗಲಕೋಟೆ: ಜ14: ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಗುಣಮಟ್ಟವನ್ನು ಪರಿಶೀಲಿಸಿದ ನಂತರವೇ ಖರೀದಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿ.ಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಿಲ್ಲದೇ ವರ್ತಕರಿಗೆ ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ ವರ್ತಕರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದು, ಗ್ರಾಹಕರು ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು. ಲಾಕ್‍ಡೌನ್ ಸಮಯದಲ್ಲಿ ವ್ಯಾಪಾರ ವಹಿವಾಡು ಸ್ಥಗಿತದ ಹಿನ್ನಲೆಯಲ್ಲಿ ವಸ್ತುಗಳನ್ನು ಖರೀದಿಸುವಾಗ ಎಕ್ಸಪೈರ್ ಡೇಟ್ ಪರಿಶೀಲಿಸಿದ ನಂತರವೇ ಖರೀದಿಸಬೇಕು. ಉತ್ತಮ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆಯಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಶಾರದಾ ಕೆ. ಮಾತನಾಡಿ ಗ್ರಾಹಕರು ಇಂದು ತಂತ್ರಜ್ಞಾನದ ಯುಗದಲ್ಲಿ ಸಿಲುಕಿದ್ದು, ಗ್ರಾಹಕರು ಯಾವುದಾದರೂ ಒಂದು ರೀತಿಯಲ್ಲಿ ಮೋಸ ಹೋಗುತ್ತಿದ್ದಾರೆ. ಗ್ರಾಹಕರ ಸಂರಕ್ಷಣೆಗಾಗಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು. ಅವುಗಳ ಪ್ರಯೋಜನಗಳನ್ನು ಗ್ರಾಹಕರು ಪಡೆದುಕೊಳ್ಳಬೇಕು. ಆಧುನಿಕ ಸಮಾಜದಲ್ಲಿ ಜಾಹಿರಾತುಗಳು ಗ್ರಾಹಕರನ್ನು ವಿವಿಧ ದೃಷ್ಠಿಯಿಂದ ಸೆಳೆಯುತ್ತವೆ. ಗ್ರಾಹಕರು ಮೋಸಹೋಗದಂತೆ ಗ್ರಾಹಕರ ಹಕ್ಕುಗಳ ಸಂರಕ್ಷಣೆಗಾಗಿ 1986 ರಲ್ಲಿ ಜಾರಿಯಾದ ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳಿಂದ ಗ್ರಾಹಕ ಕಾನೂನು ಅರಿವು ಕುರಿತು ಕಿರು ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಸುಮಂಗಲಾ ಹದ್ಲಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಶಶಿಧರ ಪೂಜಾರಿ,
ಕಾರ್ಯಕ್ರಮ ಪೂರ್ವದಲ್ಲಿ ಗ್ರಾಹಕರ ಜಾಗೃತಿಗೆ ಹಮ್ಮಿಕೊಂಡ ವಿವಿಧ ಪ್ರಾತ್ಯಕ್ಷಿಕೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ವೀಕ್ಷಿಸಿದರು.