ವಸತಿ ಸಚಿವರೊಂದಿಗೆ ಚರ್ಚಿಸಿ ಪತ್ರಕರ್ತರ ಕೋಟಾದಡಿ ಮನೆ ಮಂಜೂರಾತಿಗೆ ಪ್ರಯತ್ನಿಸುವೆ: ತಗಡೂರು

ಬೀದರ್:ನ.8: ನಗರದ ಓಲ್ಡ್ ಸಿಟಿಯಲ್ಲಿರುವ ಪತ್ರಿಕಾ ಛಾಯಾಗ್ರಾಹಕರಾದ ಗೋಪಿಚಂದ ತಾಂದಳೆ ಅವರ ಮನೆಗೆ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಭೇಟಿ ನೀಡಿ ಕುಟುಂಬದ ಕುಸಲೋಪರಿ ವಿಚಾರಿಸಿದರು.
ನೂರೈವತ್ತು ವರ್ಷಗಳ ಹಿಂದಿನ ಹಳೆಯ ಮನೆ ಇದಾಗಿದ್ದು ನೂತನ ಮನೆ ಮಂಜೂರು ಮಾಡಿಸಿ ಕೊಡುವಂತೆ ಕುಟುಂಬ ಸದಸ್ಯೆ ರೇಣುಕಾ ತಾಂದಳೆ ಆಗ್ರಹಿಸಿದಾಗ, ಸಕಾರಾತ್ಮಕವಾಗಿ ಸ್ಪಂದಿಸಿದ ತಗಡೂರು ಅವರು, ವಸತಿ ಸಚಿವರೊಂದಿಗೆ ಚರ್ಚಿಸಿ ಪತ್ರಕರ್ತರ ಕೋಟಾದಡಿ ಮನೆ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತದೆ ಎಂದು ಭರವಸೆ ನೀಡಿದರು.
ದಿವಂಗತ ಮಾರುತಿರಾವ ಕಾಂಬಳೆ ಅವರು ಒಬ್ಬ ನಿಷ್ಠಾವಂತ ಅಷ್ಟೇ ಪ್ರಾಮಾಣಿಕ ಹಾಗೂ ಸ್ವಾಭಿಮಾನಿ ಪತ್ರಿಕಾ ಛಾಯಾಗ್ರಾಹಕರೆಂಬುದು ತಿಳಿದುಕೊಂಡಿದ್ದೆ. ಆದರೆ ತನ್ನ ಕುಟುಂಬಕ್ಕಾಗಿ ಯಾವ ಸ್ವಾರ್ಥ ಮಾಡದೆ ಇಡೀ ಸಮಾಜದ ಒಳಿತಿಗಾಗಿ ದುಡಿಯುವ ಇಂಥ ಅಪರೂಪದ ಪತ್ರಕರ್ತರ ಮನೆಗೆ ಬಂದಿರುವುದಕ್ಕೆ ಹೆಮ್ಮೆ ಪಡುವುದಾಗಿ ತಿಳಿಸಿದರು.
ಮಾರುತಿರಾವ್ ತಾಂದಳೆ ಅವರ ಕೌಟುಂಬಿಕ ಹಿನ್ನೆಲೆ ಹಾಗೂ ಅವರ ಚಾರಿತ್ರಿಕ ಜೀವನ ತಿಳಿದು ಭಾವುಕರಾದ ಅವರು, ಕೂಡಲೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಗೋಪಿಚಂದ್ ತಾಂದಳೆ ಅವರ ಹೆಸರಿನಲ್ಲಿ ಮನೆ ಮಂಜೂರಾತಿಗೆ ಕೂಡಲೇ ರಾಜ್ಯ ಘಟಕಕ್ಕೆ ಅರ್ಜಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಅವರಿಗೆ ಸೂಚಿಸಿದರು. ಇದೇ ವೇಳೆ ತಗಡು ರವರು ಸ್ವತಃ ರಚಿಸಿದ ಕೋವಿಡ್ ಕಥೆಗಳು ಎಂಬ ಪುಸ್ತಕವನ್ನು ಗೋಪಿಚಂದ ತಾಂದಳೆ ಕುಟುಂಬಕ್ಕೆ ನೀಡಿ ಗೌರವಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ, ರಾಜ್ಯ ಪ್ರತಿನಿಧಿ ಬಸವರಾಜ ಕಾಮಶೆಟ್ಟಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಗೋಪಿಚಂದ ತಾಂದಳೆ, ಸಂತೋಷ ಶೆಟ್ಟಿ ಶರತ್ ಘಂಟೆ ಹಾಗೂ ಇತರರಿದ್ದರು