
ಸಂಜೆವಾಣಿ ವಾರ್ತೆ
ಚಾಮರಾಜನಗರ. ಸೆ.10:- ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಅವರು ಇಂದು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ವಸತಿ ಶಾಲೆ, ಕಣ್ಣಿನ ಆರೋಗ್ಯ ಸೇವೆಯಾದ ಆಶಾಕಿರಣ ಪ್ರಗತಿ ಪರಿಶೀಲಿಸಿದರು. ಪ್ರಸಿದ್ದ ಪ್ರವಾಸಿ ತಾಣ ಭರಚುಕ್ಕಿಗೆ ಭೇಟಿ ಕೊಟ್ಟು ಪ್ರವಾಸಿ ಸೌಲಭ್ಯಗಳನ್ನು ವೀಕ್ಷಿಸಿದರು.
ಯಳಂದೂರು ತಾಲ್ಲೂಕಿನ ವಡಗೆರೆಯಲ್ಲಿರುವ ಅಗರ-ಮಾಂಬಳ್ಳಿ ಹೋಬಳಿಗೆ ಸೇರಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿಅಲ್ಲಿನ ಕೊಠಡಿಗಳು, ಸಭಾಂಗಣ ಇತರೆ ಸ್ಥಳಗಳನ್ನು ವೀಕ್ಷಣೆ ಮಾಡಿದರು. ವಿದ್ಯಾರ್ಥಿನಿಯರಿಗೆ ವಸತಿ ಶಾಲೆಯಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಯವರು ಗುಣಮಟ್ಟದ ಊಟ-ಉಪಹಾರ ನೀಡಲಾಗುತ್ತಿದೆಯೇ, ಕೊಠಡಿಗಳು, ಶೌಚಾಲಯ ಮತ್ತಿತರಕಡೆ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದೆಯೇ? ಶೈಕ್ಷಣಿಕ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿ ತಿಳಿದುಕೊಂಡರು.
ವಿದ್ಯಾರ್ಥಿನಿಯರು ಶ್ರಮಪಟ್ಟು ಓದಬೇಕು. ಹೆಚ್ಚು ಅಂಕಗಳಿಸಿ ನಿಮಗೆ ಆಸಕ್ತಿ ಇರುವ ವಿಷಯಗಳನ್ನು ಕಾಲೇಜು ಹಂತದಲ್ಲಿ ಆಯ್ಕೆ ಮಾಡಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತಹುದ್ದೆಗಳನ್ನು ಅಲಂಕರಿಸಿ. ವಿದ್ಯಾರ್ಥಿಜೀವನವನ್ನು ಸಾರ್ಥಕಪಡಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಲಿದೆ ಎಂದು ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ಬಳಿಕ ಯಳಂದೂರು ತಾಲ್ಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮಕ್ಕೆ ಭೇಟಿ ನೀಡಿ ಅಂಧತ್ವ ಪ್ರಮಾಣ ತಗ್ಗಿಸಲುರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ನಡೆಸಲಾಗುತ್ತಿರುವ ನೇತ್ರತಪಾಸಣೆ ಆಂದೋಲನ ಕಾರ್ಯವನ್ನುಜಿಲ್ಲಾಧಿಕಾರಿಯವರು ವೀಕ್ಷಿಸಿದರು.
ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಯವರೊಂದಿಗೆ ಗ್ರಾಮದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಯವರು ಕಣ್ಣಿನ ಆರೋಗ್ಯ ಸಂರಕ್ಷಣೆಗೆಕೈಗೊಂಡಿರುವ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಕಣ್ಣಿನ ತೊಂದರೆಗಳನ್ನು ಪರಿಹರಿಸಲು ವಿಶೇಷವಾಗಿ ನಡೆಸುತ್ತಿರುವಆಶಾಕಿರಣಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಇದೇ ವೇಳೆ ಗ್ರಾಮದ ಶಾಲಾ ಮಕ್ಕಳೊಂದಿಗೆ ಜಿಲ್ಲಾಧಿಕಾರಿಯವರು ಆತ್ಮೀಯವಾಗಿ ಮಾತನಾಡಿದರು. ಪ್ರಸಿದ್ಧ ಪ್ರವಾಸಿ ಸ್ಥಳ ಭರಚುಕ್ಕಿ ಹಾಗೂ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿದಜಿಲ್ಲಾಧಿಕಾರಿಯವರುಅಲ್ಲಿ ಪ್ರವಾಸಿಗರಿಗೆ ಒದಗಿಸಿರು ಸೌಲಭ್ಯಗಳನ್ನು ಪರಿಶೀಲನೆ ಮಾಡಿದರು.ಪ್ರವಾಸಿಗರು ವಹಿಸಬೇಕಿರುವ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳು ಪಾಲನೆ ಮಾಡುವಂತೆ ಮನವರಿಕೆ ಮಾಡಿಕೊಡಬೇಕುಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಶಿಲ್ದಾರ್ ಮಂಜುಳ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.