ವಸತಿ ಶಾಲೆಯಲ್ಲಿ ೨೧೫ ಮಕ್ಕಳ ಅಸ್ಥಿಪಂಜರ ಪತ್ತೆ

ಟೊರಾಂಟೊ (ಕೆನಡ), ಮೇ 30- ಈಗ ಮುಚ್ಚಿರುವ, ಬುಡಕಟ್ಟು ಸಮುದಾಯದ ಮಕ್ಕಳಿಗಾಗಿನ ವಸತಿ ಶಾಲೆಯೊಂದರ ಸ್ಥಳದಲ್ಲಿ 215 ಮಕ್ಕಳ ಅಸ್ಥಿಪಂಜರಗಳು ಪತ್ತೆಯಾಗಿವೆ. ಇದರಲ್ಲಿ ಮೂರು ವರ್ಷ ಪ್ರಾಯದ ಮಕ್ಕಳ ಅವಶೇಷಗಳೂ ಇವೆ.

ಈ ಮಕ್ಕಳು ಕೆನಡದ ಬ್ರಿಟಿಶ್ ಕೊಲಂಬಿಯ ರಾಜ್ಯದಲ್ಲಿದ್ದ ಕಂಪ್ಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ನ ವಿದ್ಯಾರ್ಥಿಗಳಾಗಿದ್ದರು. ಈ ವಸತಿ ಶಾಲೆಯನ್ನು 1978ರಲ್ಲಿ ಮುಚ್ಚಲಾಗಿದೆ. ನೆಲದ ಮೂಲಕ ಹಾದುಹೋಗುವ ರಾಡಾರ್ ತಂತ್ರಜ್ಞಾನವನ್ನು ಬಳಸಿ ಈ ಅಸ್ಥಿಪಂಜರಗಳನ್ನು ಪತ್ತೆಹಚ್ಚಲಾಗಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ. ‘‘ಈಗ ನಮ್ಮಲ್ಲಿ ಉತ್ತರಕ್ಕಿಂತಲೂ ಹೆಚ್ಚು ಪ್ರಶ್ನೆಗಳಿವೆ’’ ಎಂದು ಸ್ಥಳೀಯ ಸಂಘಟನೆಯೊಂದರ ಮುಖ್ಯಸ್ಥ ರೊಸಾನ್ ಕಾಸಿಮಿರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಬುಡಕಟ್ಟು ಮಕ್ಕಳನ್ನು ಅವರ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸುವ ಕೆನಡದ ವಸತಿ ಶಾಲೆ ವ್ಯವಸ್ಥೆಯು ‘‘ಸಾಂಸ್ಕತಿಕ ಜನಾಂಗೀಯ ಹತ್ಯೆ’’ಯಾಗಿತ್ತು ಎಂಬುದಾಗಿ 2015ರಲ್ಲಿ ಅಧ್ಯಯನವೊಂದು ಹೇಳಿದೆ. ಈಗ ಅಸ್ತಿತ್ವದಲ್ಲಿರದ ಈ ಮಾದರಿಯ ವಸತಿ-ಶಾಲೆ ವ್ಯವಸ್ಥೆ ಬಗ್ಗೆ ಆರು ವರ್ಷಗಳ ಅಧ್ಯಯನ ನಡೆದಿತ್ತು.  ಇಂಥ ವಸತಿ ಶಾಲೆಗಳು 1840ರ ದಶಕದಿಂದ 1990ರ ದಶಕದವರೆಗೆ ನಡೆದುಕೊಂಡು ಬಂದಿವೆ. ಒಟ್ಟಾವ ನಗರದ ಪರವಾಗಿ ಚರ್ಚ್ ಗಳು ಅವುಗಳನ್ನು ನಡೆಸಿಕೊಂಡು ಬಂದಿದ್ದವು. ಈ ಮಾದರಿಯ ವಸತಿ ಶಾಲೆಗಳಲ್ಲಿ ಭಯಾನಕ ದೈಹಿಕ ಹಿಂಸಾಚಾರ, ಅತ್ಯಾಚಾರ ಮತ್ತು ಇತರ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದವು ಹಾಗೂ ಅಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಎಂಬುದಾಗಿಯೂ ಅಧ್ಯಯನ ವರದಿ ತಿಳಿಸಿದೆ. ಇಂಥ ಶಾಲೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮಕ್ಕಳು ಇದ್ದರು. ವಸತಿ ಶಾಲೆಗಳಲ್ಲಿ 4,100ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಆದರೆ, ಈಗ ಪತ್ತೆಯಾಗಿರುವ 215 ಮಕ್ಕಳ ಸಾವು ಅದರಲ್ಲಿ ಸೇರಿಲ್ಲ ಎಂದು ಭಾವಿಸಲಾಗಿದೆ.