ವಸತಿ ಶಾಲೆಯಲ್ಲಿ ನೀರಿಗಾಗಿ ಪರದಾಟ


ಬೈಲಹೊಂಗಲ,ಜೂ.25: ಒಂದು ಕಡೆ ಬಿಸಿಲಿನ ಧಗೆಯಿಂದ ಬಸವಳಿದರೆ ಇತ್ತ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದು ಕಲಿಕೆಗೆ ತೀವೃ ತೊಂದರೆಯಾಗಿದ್ದರ ವ್ಯವಸ್ಥೆಯ ವಿರುದ್ದ ಪ್ರತಿಭಟನೆಗಿಳಿದ ಘಟನೆ ಶುಕ್ರವಾರ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜರುಗಿದೆ.
ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ನಡೆಯುವ ಪಟ್ಟಣದ ಹೊರ ವಲಯದಲ್ಲಿನ ಬಾಲಕಿಯರ ಈ ವಸತಿ ಶಾಲೆಯಲ್ಲಿ ಪ್ರತಿವರ್ಷ ಸುಮಾರು 280 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಅಭ್ಯಸಿಸುತ್ತಿದ್ದು ಸಮರ್ಪಕ ನೀರಿಲ್ಲದ ಕಾರಣ ತುಂಬಾ ಪಡಿಪಾಟಲು ಅನುಭವಿಸಬೇಕಾಗಿದೆ.
ತುಂಬಾ ವಿಶಾಲವಾದ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು ಅಗತ್ಯ ಸೌಲಭ್ಯಗಳಿಂದ ಇಲ್ಲಿನ ವಿದ್ಯಾರ್ಥಿಗಳು ತೀರಾ ವಂಚಿತರಾಗುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಕುಡಿಯುವ ನೀರು ಸೇರಿದಂತೆ ವಿವಿಧ ಅಗತ್ಯತೆಗೆ ನೀರು ಸರಿಯಾಗಿ ಸಿಗದ ಕಾರಣ ಆಟ ಪಾಠಕ್ಕೆ ಸದಾ ಹಿನ್ನೆಡೆಯಾಗುತ್ತಿದೆ ಎಂಬುದು ಇಲ್ಲಿನ ವಿದ್ಯಾರ್ಥಿನಿಯರ ಗೋಳಾಗಿದೆ.
ಈ ಹಾಸ್ಟೇಲಿಗೆ ದಿನನಿತ್ಯ ಕೇವಲ 2 ರಿಂದ 3 ಟ್ಯಾಂಕರ ಮಾತ್ರ ನೀರು ಬೇರೆ ಬೇರೆ ಕಡೆಯಿಂದ ಪೂರೈಸುತ್ತಿರುವದರಿಂದ ಅಗತ್ಯ ನೀರಿಲ್ಲದ ಕಾರಣ ಅಸ್ವಚ್ಛತೆ ಹಾಸ್ಟೇಲನಲ್ಲಿ ತಾಂಡವಾಡುತ್ತಿದ್ದು ಹಾಸ್ಟೇಲ ಬಿಟ್ಟು ಊರುಗಳಿಗೆ ಹೋಗಬೇಕೆಂದು ತಮ್ಮ ಅಸಹಾಯಕತೆಯನ್ನು ವಿದ್ಯಾರ್ಥಿಗಳು ಹೊರ ಹಾಕುತ್ತಿದ್ದಾರೆ.
ಸರಕಾರ ಕೋಟ್ಯಾಂತರ ಹಣ ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಿದ್ದು ಆದರೆ ಸರಕಾರ ಮೂಲಭೂತ ಸೌಲಭ್ಯ ಒದಗಿಸಲು ಮೈಮರೆತಂತಿದೆ ಎನ್ನಲಾಗಿದೆ. ವಿದ್ಯಾರ್ಥಿನಿಯರ ಸಮಸ್ಯೆಯನ್ನು ಈಡೇರಿಸದಿದ್ದರೆ ಊಟ ಮಾಡುವದಿಲ್ಲವೆಂದು ಪಟ್ಟು ಹಿಡಿದು ಪ್ರತಿಭಟಿಸಿದರು.

ಮೇಲಾಧಿಕಾರಿಗಳ ಆದೇಶದ ಮೇರೆಗೆ ವಸತಿ ನಿಲಯಕ್ಕೆ ಬೇಟಿ ನೀಡಿದ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಸಿ.ಬಿ.ಯಮನೂರ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಆಲಿಸಿ ನೀರಿನ ಸಮಸ್ಯೆ ತೀವ್ರವಾದದ್ದು ಮನಗಂಡು ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ, ಟ್ಯಾಂಕರ ಮೂಲಕ ನೀರು ಪೂರೈಕೆ ಮಾಡಿದರೂ ಅಲ್ಲದೇ ವಸತಿ ನಿಲಯಕ್ಕೆ 24/7 ನೀರು ಪೂರೈಕೆಗಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.