ವಸತಿ ಯೋಜನೆಗಳಲ್ಲಿ ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ: ವಿ.ಸೋಮಣ್ಣ

ಚಾಮರಾಜನಗರ: ಮಾ.27:- ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸುವಾಗ ಮೂಲ ಸೌಕರ್ಯಗಳಿಗೆ ವಿಶೇಷ ಆದ್ಯತೆ ನೀಡುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ದಿ ಕೋಶ ಮತ್ತು ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಹಿಳೆಯರು ಹಾಗೂ ಪೌರಕಾರ್ಮಿಕರಿಗೆ ವಿಶೇಷ ಸವಲತ್ತುಗಳು, ಮನೆಗಳ ಹಸ್ತಾಂತರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ವಸತಿ ಯೋಜನೆ ನೀಡುವಾಗಲೇ ನೀರು, ಶೌಚಾಲಯ, ಇನ್ನಿತರ ಮೂಲ ಸೌಲಭ್ಯಗಳು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ದೂರದೃಷ್ಠಿಯಿಂದ ಬಡವರ ಕೆಲಸ ಮಾಡಿಕೊಡಬೇಕು. ಎಲ್ಲಿಯೂ ತೊಂದರೆ ಆಗದ ಹಾಗೆ ಜನರಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಬಡವರಿಗೆ ಸೂರು ಅತ್ಯಂತ ಅವಶ್ಯಕವಾಗಿದೆ. ವಸತಿ ಯೋಜನೆ ಸಿಕ್ಕರೆ ಅವರ ಜೀವನದಲ್ಲಿ ಆನಂದ, ನೆಮ್ಮದಿ ಕಾಣಬಹುದು. ಭವಿಷ್ಯದ ಹಿತದೃಷ್ಠಿಯಿಂದ ಮನೆಗಳನ್ನು ನೀಡಬೇಕಾಗುತ್ತದೆ. ಒಳ್ಳೆಯ ಕಾರ್ಯದಲ್ಲಿ ಎಲ್ಲರು ತೊಡಗಿಕೊಳ್ಳೋಣ ಎಂದು ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ವಸತಿ, ಮೂಲ ಸೌಕರ್ಯಗಳು ಜನರಿಗೆ ಅತ್ಯಗತ್ಯವಾಗಿವೆ. ಮಹಿಳೆಯರಿಗೆ ಇಂದು ನೀಡಲಾಗುತ್ತಿರುವ ಹೊಲಿಗೆಯಂತ್ರಗಳಿಂದ ಆರ್ಥಿಕವಾಗಿ ಅನುಕೂಲವಾಗಲಿದೆ. ಸೌಲಭ್ಯಗಳಿಂದ ಜನರ ಜೀವನ ಹಸನಾಗಲಿ ಎಂದು ಆಶಿಸಿದರು.
ಇದೇ ವೇಳೆ ಗಣ್ಯರು ಮಹಿಳೆಯರಿಗೆ ಹೊಲಿಗೆಯಂತ್ರಗಳನ್ನು ವಿತರಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆಗಳ ಕೀ ಹಸ್ತಾಂತರಿಸಿದರು.
ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಉಪಾಧ್ಯಕ್ಷರಾದ ಸುಧಾ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭಾ ಸದಸ್ಯರಾದ ಮನೋಜ್ ಪಟೇಲ್, ಮಹೇಶ್, ಕಲಾವತಿ, ಶಿವರಾಜ್, ರಾಘವೇಂದ್ರ, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮ್‍ದಾಸ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.