ವಸತಿ ಬಡಾವಣೆ ಮುಖ್ಯದ್ವಾರ ಲೋಕಾರ್ಪಣೆ

ಕನಕಪುರ, ಮಾ.೧೦- ಇಲ್ಲಿನ ಬೆಂಗಳೂರು ರಸ್ತೆಯ ರಾಯಸಂದ್ರ ಬಳಿ ಕೆಢಎಚ್‌ಬಿ ಯಿಂದ ನಿರ್ಮಾಣ ಮಾಡಿರುವ ರಾಷ್ಟ್ರಕವಿ ಕುವೆಂಪು ಸಂಯುಕ್ತ ವಸತಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಮುಖ್ಯದ್ವಾರವನ್ನು ಲೋಕಾರ್ಪಣೆ ಮಾಡಲಾಯಿತು.
ಉದ್ಘಾಟನೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮತ್ತು ತುಂಗಣಿ ಗ್ರಾಮ ಪಂಚಾಯ್ತಿಅಧ್ಯಕ್ಷ ರಾಂಪುರ ಪ್ರಕಾಶ್ ಹಾಗೂ ಕೆಎಚ್‌ಬಿ ಅಧಿಕಾರಿಗಳು ಉಪಸ್ಥಿತರಿದ್ದು ನೆರವೇರಿಸಿಕೊಟ್ಟರು.
ಉದ್ಘಾಟನೆ ಮುಗಿಯುತ್ತಿದ್ದಂತೆ ಡಿ.ಕೆ.ಸುರೇಶ್ ಹೊರಟರು. ನಂತರದಲ್ಲಿ ವಿ.ಸೋಮಣ್ಣ ವೇದಿಕೆ ಕಾರ್ಯಕ್ರಮ ನಡೆಸಿಕೊಟ್ಟರು.


ಈ ವೇಳೆ ಅವರು ಮಾತನಾಡಿ ಇಲ್ಲಿ ನಿರ್ಮಾಣ ಮಾಡುತ್ತಿರುವ ಹೌಸಿಂಗ್ ಬೋರ್ಡ್ ರಾಜ್ಯದಲ್ಲಿಯೇ ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಭಾಗವಾಗಿ ಉಪನಗರವಾಗಿ ಬೆಳೆಯಲಿದೆ, ಇಲ್ಲಿ ನಿವೇಶನ ಪಡೆದಿರುವವರು ಯಾರು ನಿವೇಶನ ಮಾರಿಕೊಳ್ಳಬೇಡಿ ಮುಂದೆ ಭವಿಷ್ಯದಲ್ಲಿ ನಿಮ್ಮ ತಲೆ ಕಾಯಲಿದೆ ಎಂದು ತಿಳಿಸಿದರು.
ಸಚಿವರು ಆ ಮಾತು ಹೇಳುತ್ತಿದ್ದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಮಾತನಾಡಿ ನಮ್ಮಿಂದ ಒಂದು ಲಕ್ಷಕ್ಕೆ ಜಮೀನು ಖರೀದಿ ಮಾಡಿ ಅದನ್ನು $ ೧೨ ಲಕ್ಷಕ್ಕೆ ಮಾರಾಟ ಮಾಡಿ ನಮಗೆ ಮೋಸ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಅದಕ್ಕೆ ಸಚಿವರು ಸುಮ್ಮನೆ ಇರಪ್ಪ, ನಾವು ಎಲ್ಲಿಯೂ ರೈತರಿಗೆ ಮೋಸ ಮಾಡಿ ಜಮೀನು ಪಡೆದು ಹಣ ಮಾಡುತ್ತಿಲ್ಲ, ಬದಲಾಗಿ ಬಡವರಿಗೆ ಸೂರು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಕೆಎಚ್‌ಬಿ ನೋ ಲಾಸ್, ನೋ ಪ್ರಾಪಿಟ್ ನಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದೆ, ಯಾರು ಇದರಲ್ಲಿ ತಪ್ಪು ತಿಳಿಯಬೇಡಿ ಎಂದು ಸಮಾಧಾನ ಪಡಿಸಲು ಪ್ರಯತ್ನಿಸಿದರು.
ಆ ಮಾತಿನಿಂದ ಸಮಾಧಾನಗೊಳ್ಳದ ರೈತರು ನಮಗೆ ಕೊಟ್ಟಿರುವ ನಿವೇಶಗಳನ್ನು ನೊಂದಣಿ ಮಾಡಿಸಲು ಶೇ.೨೫ ರಷ್ಟು ಹಣ ಕಟ್ಟಲು ಅಧಿಕಾರಿಗಳು ಹೇಳುತ್ತಿದ್ದಾರೆ. ಪೊಲೀಸನವರಿಗೆ ಮಾತ್ರ ಉಚಿತವಾಗಿ ನಿವೇಶನ ಹಂಚುತ್ತಿದ್ದೀರಿ, ಜಮೀನು ಕಳೆದುಕೊಂಡಿರುವ ನಮಗೂ ಉಚಿತವಾಗಿ ನಿವೇಶನ ನೀಡಿ ಎಂದು ಒತ್ತಾಯಿಸಿದರು.
ಸೋಮಣ್ಣನವರು ರೈತರನ್ನು ಸಮಾಧಾನ ಪಡಿಸಲು ಎಷ್ಟೇ ಪ್ರಯತ್ನಿಸಿದರೂ ಪರಿಸ್ಥಿತಿ ಕೈ ಮೀರುತ್ತಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಅದಕ್ಕೂ ರೈತರು ಸಮಾಧಾನವಾಗದೆ ಸಚಿವರನ್ನು ಉಚಿತ ನಿವೇಶನ ನೀಡುವಂತೆ ಒತ್ತಾಯಿಸುತ್ತಲೇ ಇದ್ದರು.
ಆಗ ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಧ್ಯ ಪ್ರವೇಶಿಸಿ ಸ್ವಲ್ಪ ಸಮಾಧಾನದಿಂದ ಇರರಪ್ಪ, ಇಡೀ ರಾಜ್ಯದಲ್ಲಿ ಎಲ್ಲಿಯೂ ಜಮೀನು ಕಳೆದುಕೊಂಡ ರೈತರಿಗೆ ಉಚಿತವಾಗಿ ನಿವೇಶನ ನೀಡಿಲ್ಲ, ಆದರೆ ಸೋಮಣ್ಣನವರು ನಮ್ಮ ತಾಲ್ಲೂಕಿನವರಾಗಿರುವುದರಿಂದ ರೈತರಿಗೆ ಒಳ್ಳೆಯದಾಗಲಿ ಎಂದು ಒಂದು ಎಕರೆಗೆ ಒಂದು ಸೈಟು ನೀಡಿದ್ದಾರೆ.
ಆದರೆ ಅದರ ಡೆವಲಪ್‌ಮೆಂಟ್‌ಗೆ ಶೇ.೨೫ ರಷ್ಟು ಹಣ ಕಟ್ಟಬೇಕಿದೆ. ಪೊಲೀಸಿನವರಿಗೂ ಇಲ್ಲಿ ಜನಸಾಮಾನ್ಯರಿಗೆ ನೀಡಿದ ದರದಲ್ಲಿ ನಿವೇಶನ ನೀಡಲಾಗುತ್ತಿದೆ, ಯಾರಿಗೂ ಉಚಿತವಾಗಿ ನೀಡಿಲ್ಲ ಎಂದು ರೈತರಿಗೆ ತಿಳಿ ಹೇಳಿದರು.
ಅಂತಿಮವಾಗಿ ರೈತರಿಗೆ ನೀಡಿರುವ ನಿವೇಶನದ ಡೆವಲಂಪ್‌ಮೆಂಟ್ ಹಣವನ್ನು ಕಡಿಮೆ ಮಾಡಬೇಕೆಂದು ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದು, ಅದಕ್ಕೆ ಸಚಿವರು ಶೇಕಡ ೨೫ ರಷ್ಟರ ಬದಲಾಗಿ ಶೇ.೧೦ ರಷ್ಟು ಹಣ ಕಟ್ಟುವಂತೆ ತಿಳಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ರೈತರಿಂದ ಶೇ.೧೦ ರಷ್ಟು ಹಣ ಪಡೆಯುವಂತೆ ಸೂಚನೆ ನೀಡಿದರು.
ಅಂತಿಮವಾಗಿ ನೀವಶನ ಹಂಚಿಕೆಯಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಯಾಗಿ ವಸತಿ ಸಚಿವ ವಿ.ಸೋಮಣ್ಣ ಅವರು ಪೊಲೀಸರು ಮತ್ತು ಪತ್ರಕರ್ತರಿಗೆ ಹಂಚಿಕೆಯಾಗಿದ್ದ ನಿವೇಶನದ ಪತ್ರವನ್ನು ಸ್ಥಳದಲ್ಲಿ ಹಂಚಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಗೃಹ ಮಂಡಳಿಯ ಆಯುಕ್ತೆ ಕವಿತಾ ಎಸ್.ಮನ್ನಿಕೇರಿ, ಮುಖ್ಯ ಅಭಿಯಂತರ ಶರಣಪ್ಪ, ತುಂಗಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಂಪುರ ಪ್ರಕಾಶ್ ಸೇರಿದಂತೆ ಕೆಎಚ್‌ಬಿ ಅಧಿಕಾರಿಗಳು ಉಪಸ್ಥಿತರಿದ್ದರು.