ವಸತಿ ಫಲಾನುಭವಿಗಳಿಗೆ ಬಾಕಿ ಹಣ ಬಿಡುಗಡೆಗೆ 15 ದಿನ ಗಡುವು

ಬೀದರ:ನ.6: ಜಿಲ್ಲೆಯಾದ್ಯಂತ ಈಗಾಗಲೇ ನಿಯಮಾನುಸಾರ ಮನೆ ಮಂಜೂರಾತಿಯಾಗಿರುವ ಎಲ್ಲ ಫಲಾನುಭವಿಗಳಿಗೆ ಬಾಕಿ ಹಣ 15 ದಿನಗಳಲ್ಲಿ ಬಿಡುಗಡೆ ಮಾಡುವುದೂ ಸೇರಿದಂತೆ ತಮ್ಮ ನಾಲ್ಕು ಅಂಶಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಜನರು ಹೋರಾಟ ಮಾಡಲಿದ್ದು ಸಂಭವನೀಯ ಕಷ್ಟ ನಷ್ಟಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಕಾಂಗ್ರೆಸ್‍ನ ಜನಪ್ರನಿಧಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಅವರು ಇಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುವಾರ ನಾಲ್ಕು ಪುಟಗಳ ಮನವಿ ಪತ್ರ ಸಲ್ಲಿಸಿ ಬಳಿಕ ಮನವಿ ಪತ್ರದ ಪ್ರತಿಯನ್ನು ಅವರು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ರಾಜಶೇಖರ್ ಪಾಟೀಲ್, ರಹೀಮ್ ಖಾನ್, ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ವಿಜಯ್ ಸಿಂಗ್, ಅರವಿಂದ ಕುಮಾರ್ ಅರಳಿ, ಡಾ.ಚಂದ್ರಶೇಖರ್ ಪಾಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತ್ ಚಿದ್ರಿ ಮತ್ತು ಉಪಾಧ್ಯಕ್ಷರಾದ ಲಕ್ಷಣ್ ಬುಳ್ಳಾ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ರಾಜಕೀಯ ದುರುದ್ದೇಶದಿಂದ ತನಿಖೆ ನಡೆಸಿ ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಸುಮಾರು 8 ಸಾವಿರ ಫಲಾನುಭವಿಗಳಿಗೆ ಬರಬೇಕಾದ ಕಂತು ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಹಣ ಹಿಂತಿರುಗಿಸುವಂತೆ ನೊಟೀಸ್ ನೀಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಪತ್ರದಲ್ಲಿ ಸಿಎಮ್ ಬಿಎಸ್‍ವೈಗೆಒತ್ತಾಯಿಸಲಾಗಿದೆ. ಮನೆಯ ವಿಸ್ತೀರ್ಣ ಕಡಿಮೆ ಇದೆ ಎಂಬ ಕಾರಣ ಕೈ ಬಿಟ್ಟು ಪ್ರತಿಯೊಬ್ಬ ಫಲಾಭವಿಗಳಿಗು ಕೂಡ ಹಣ ಪಾವತಿಸಬೇಕು ಎಂದು ಮನವಿ ಪತ್ರದಲ್ಲಿ ಅವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.

ಕಳೆದ 15 ತಿಂಗಳುಗಳಿಂದ ಬೀದರ್ ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ಬಡವರಿಗೆ ಮನೆ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಈಗಾಗಲೇ ಮನೆಗಳಿಗಾಗಿ ಅರ್ಜಿ ಸಲ್ಲಿಸಿರುವವರ ಮತ್ತು ಹೊಸದಾಗಿ ಅರ್ಜಿ ಸಲ್ಲಿಸಿದವರ ಅರ್ಜಿ ಪರಿಶೀಲಿಸಿ ಜಿಲ್ಲೆಯಾದ್ಯಂತ ಬಡವರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಮತ್ತು ಯೋಜನೆಯನ್ನು ಬೀದರ್ ಜಿಲ್ಲೆಯಲ್ಲಿ ಮುಂದುವರೆಸುವಂತೆ ಮನವಿ ಪತ್ರದಲ್ಲಿ ಸಿಎಮ್ ಬಿಎಸ್‍ವೈಗೆ ಒತ್ತಾಯಿಸಲಾಗಿದೆ.