ವಸತಿ ನಿಲಯ,ವಸತಿ ಶಾಲೆಗಳ 25,000 ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಪ್ರಿಯಾಂಕ್ ಖರ್ಗೆ ಒತ್ತಾಯ

ಕಲಬುರಗಿ,ಮೇ.29:ಸರ್ಕಾರದ‌ ವಿವಿಧ ಇಲಾಖೆಗಳಲ್ಲಿನ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 25,000 ಕಾರ್ಮಿಕರ ಬಾಕಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ‌ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು ರಾಜ್ಯದ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 25,000 ಕಾರ್ಮಿಕರ ಹಲವು ತಿಂಗಳು ವೇತನ ಬಾಕಿ ಇದೆ. ಈ ಬಗ್ಗೆ ಕಾರ್ಮಿಕರು ಆನ್ ಲೈನ್ ಮೂಲಕ ಪ್ರತಿಭಟನೆ ನಡೆಸಿದ್ದರು. ಆದರೂ ಕೂಡಾ ಅವರ ಕೂಗಿಗೆ ಇದೂವರೆಗೆ ಸ್ಪಂದನೆ ಸಿಕ್ಕಿಲ್ಲ‌ ಎಂದು ವಿವರಿಸಿದ್ದಾರೆ.

ಮತ್ತೊಂದು ಪ್ರಮಖ ವಿಷಯವನ್ನು ಪ್ರಸ್ತಾಪಿಸಿರುವ ಶಾಸಕರು, ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ವಸತಿ ನಿಲಯ ಹಾಗೂ ವಸತಿ ಶಾಲೆಗಳು ಪ್ರಾರಂಭವಾಗುವರೆಗೆ ಅವರ ಸೇವೆಯನ್ನು ಮುಂದುವರೆಸಿಕೊಂಡು‌ ಹೋಗಬೇಕು ಎಂದು ಹೇಳಿದ್ದಾರೆ.

ಕೋವಿಡ್ ನಿಂದಾಗಿ ರಾಜ್ಯದ‌ಲ್ಲಿ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜೊತೆಗೆ ವಸತಿ ನಿಲಯ ಹಾಗೂ ಶಾಲೆಗಳನ್ನು ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೂ ಕೂಡಾ ಇದು ದುಷ್ಪರಿಣಾಮ ಬೀರಿದೆ. ಹಾಗಾಗಿ, ರಾಜ್ಯ ಸರ್ಕಾರ ಈ ಕೂಡಲೇ, ಕಾರ್ಮಿಕರ ಬಾಕಿ ವೇತನ ಬಿಡುಗಡೆ ಮಾಡುವುದಲ್ಲದೇ, ಗುತ್ತಿಗೆ ಆಧಾರದ ಕಾರ್ಮಿಕರ ಸೇವೆಯನ್ನು ಮುಂದುವರೆಸಬೇಕು ಜೊತೆಗೆ ಆ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವುದರ ಮೂಲಕ ಈಗಾಗಲೇ ನೊಂದಿರುವ ಬಡ ಕಾರ್ಮಿಕರ ಹಸಿವು ನೀಗಿಸುವ ಕೆಲಸ ಮಾಡಬೇಕು ಎಂದು ಪ್ರಿಯಾ‌ಂಕ್ ಖರ್ಗೆ ಅವರು ಬರೆದಿರುವ ಪತ್ರದಲ್ಲಿ ಒತ್ತಿ ಹೇಳಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.