ಕಲಬುರಗಿ:ಜು.05: ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಸತಿ ನಿಲಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಅವುಗಳ ವ್ಯಾಪ್ತಿಯ ನಿಗಮಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ವಸತಿ ನಿಲಯದಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಕೆಯಾಗಬೇಕು. ಶೌಚಾಲಯ ನಿರ್ವಹಣೆ ಸರಿಯಾಗಿರಬೇಕು. ಒಟ್ಟಿನಲ್ಲಿ ವಸತಿ ನಿಲಯ ಅವರಣದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದರು.
ಊಟ ಗುಣಮಟ್ಟದಾಗಿರಲಿ: ನಿಲಯಾರ್ಥಿಗಳಿಗೆ ಬಡಿಸುವ ಮತ್ತು ಅಡುಗೆ ತಯ್ಯಾರಿಸುವ ಕೋಣೆ ಶುಚಿತ್ವ ಕಾಪಾಡಬೇಕು. ವಿದ್ಯಾರ್ಥಿಗಳಿಂದ ಯಾವುದೇ ದೂರಿಗೆ ಆಸ್ಪದ ನೀಡಬಾರದು. ಊಟ ಗುಣಮಟ್ಟದಿಂದ ಕೂಡಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಮಹರ್ಷಿ ವಾಲ್ಮಿಕಿ ನಿಗಮ, ಅಲ್ಪಸಂಖ್ಯಾತ ನಿಗಮ, ಡಿ.ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮಗಳ ಕಾರ್ಯಚಟುವಟಿಕೆಗಳು ಕುರಿತು ಪ್ರಗತಿ ಪರಿಶೀಲನೆ ಮಾಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಾವೀದ್ ಕೆ. ಕರಂಗಿ ಸೇರಿದಂತೆ ವಿವಿಧ ನಿಗಮದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.