ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೨೮; ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು ದುರಸ್ಥಿ ಇದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಂಡು ಚಾಲನೆಯಲ್ಲಿಟ್ಟಿರಬೇಕು. ಮಹಿಳಾ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಜೊತೆಗೆ 24*7 ಕಾವಲುಗಾರರನ್ನು ನೇಮಿಸಬೇಕು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈಚೆಗೆ ಜಿಲ್ಲೆಯಲ್ಲಿರುವ ವಸತಿ ನಿಲಯಗಳ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಜಿಲ್ಲಾಮಟ್ಟದ ವಸತಿ ನಿಲಯಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿರುವ ಎಲ್ಲಾ ವಸತಿನಿಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶುದ್ಧನೀರನ್ನು ಒದಗಿಸಬೇಕು. ವಸತಿ ನಿಲಯಗಳಲ್ಲಿರುವ ಶೌಚಾಲಯವು ಶುಚಿತ್ವದಿಂದ ಕೂಡಿರಬೇಕು ಎಂದು ಸೂಚನೆ ನೀಡಿದರು.ಆಹಾರದ ಮೆನು ಪ್ರಕಾರ ತಾಜಾ ತರಕಾರಿಗಳನ್ನು ಹಾಕಿ, ಉತ್ತಮ ಗುಣಮಟ್ಟದ ಆಹಾರವನ್ನು ಶುಚಿ ಮತ್ತು ರುಚಿಯಾಗಿ ಸಿದ್ದಪಡಿಸಿ ಕೊಡಬೇಕು. ಆಹಾರ ತಯಾರಿಸುವಾಗ ಅಡುಗೆ ಮಾಡುವವರು ಸುರಕ್ಷಿತ ಉಡುಪುಗಳನ್ನು ಧರಿಸಿ ಆಹಾರ ತಯಾರಿಸಬೇಕು. ಶುಚಿ ಸಂಭ್ರಮದ ಬಗ್ಗೆ ವಾರ್ಡ್‍ನ್‍ಗಳು ಖಾತ್ರಿ ಪಡಿಸಿಕೊಳ್ಳಬೇಕು. ದೂರು ಪೆಟ್ಟಿಗೆ ಹಾಗೂ ದೂರು ರಿಜಿಸ್ಟರ್‍ಗಳನ್ನು ವಸತಿ  ನಿಲಯಗಳಲ್ಲಿ ಕಡ್ಡಾಯವಾಗಿ ಇಟ್ಟಿರಬೇಕು ಹಾಗೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸೂಚಿಸಿದರು.