ವಸತಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ: ನಾಗೇಶ

ರಾಯಚೂರು,ಜು.೨೭- ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಸೂಕ್ತ ಮೂಲಬೂತ ಸೌಲಭ್ಯಗಳನ್ನು ಒದಗಿಸಲು ಮತ್ತು ವಿದ್ಯಾರ್ಥಿಗಳಿಗೆ ಸರಿಯಾದ ಊಟದ ವ್ಯವಸ್ಥೆ ಮತ್ತು ಭದ್ರತೆಯನ್ನು ಒದಗಿಸಬೇಕೆಂದು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಅಧಿಕಾರಿ ನಾಗೇಶ ಅವರು ಅಧಿಕಾರಿಗಳು ಹಾಗೂ ವಸತಿ ನಿಲಯದ ಸಿಬ್ಬಂದಿಗಳಿಗೆ ತಿಳಿಸಿದರು.
ಅವರು ಜು.೨೪ರ(ಸೋಮವಾರ) ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು.
ದೇವದುರ್ಗ ತಾಲೂಕಿನ ಅರಕೇರಾ ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿ ಹೊಸದಾಗಿ ಫ್ಯಾನ್ ಮತ್ತು ಟ್ಯೂಬ್ ಲೈಟ್ ಅಳವಡಿಕೆ, ಡಸ್ಟ್ ಬಿನ್ ಮತ್ತು ಮ್ಯಾಟುಗಳ ವ್ಯವಸ್ಥೆ, ಶೌಚಾಲಯ ಸ್ನಾನ ಗೃಹಗಳ ಕಿಡಕಿ ಬಾಗಿಲುಗಳ ರಿಪೇರಿ, ವಿದ್ಯಾರ್ಥಿಗಳ ಕೊಠಡಿಗಳ ಕಿಟಕಿಗಳಿಗೆ ಮೆಸ್ ಅಳವಡಿಕೆ, ವಿದ್ಯಾರ್ಥಿಗಳಿಗೆ ಸೋಪ್ ಕಿಟ್ ಮತ್ತು ಲೇಖನ ಸಾಮಗ್ರಿಗಳ ವಿತರಣೆ, ಆಹಾರ ಧಾನ್ಯಗಳ ಸಂಗ್ರಹ ಮತ್ತು ವಿತರಣೆ, ತಾಜಾ ತರಕಾರಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೆನು ಚಾಟ್ ಪ್ರಕಾರ ಊಟ ಉಪಹಾರದ ವ್ಯವಸ್ಥೆ ಹಾಸಿಗೆ ಹೊದಿಕೆಗಳಿಗೆ ಬೆಡ್ ಶೀಟ್ ವ್ಯವಸ್ಥೆ ಮುಂತಾದವುಗಳು ಕುರಿತು ನಿಲಯ ಮೇಲ್ವಿಚಾರಕರಾದ ಭೀಮರಾಯರವರು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.
ವಸತಿ ನಿಲಯದಲ್ಲಿ ಸೋಲಾರ್ ವಾಟರ್ ಹೀಟರ್, ವಾಟರ್ ಫ್ಯೂರಿ ಫೈರ್ ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಟ್ ಮತ್ತು ಬೆಡ್ ವ್ಯವಸ್ಥೆ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಬಾಡಿಗೆ ಕಟ್ಟಡದ ಮಾಲೀಕರಿಗೆ ಸೂಕ್ತ ಕಾಂಪೌಂಡ್ ವ್ಯವಸ್ಥೆ ನಿರ್ಮಿಸಲು ತಿಳಿಸಿದರು.
ವಸತಿ ನಿಲಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಕೇರಾ ಪಟ್ಟಣದಲ್ಲಿ ಫೌಂಡೇಶನ್ ಹಂತದಲ್ಲಿರುವ ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿ ನಿಯಮಾನುಸಾರ ನಿಗದಿತ ಸಮಯದಲ್ಲಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು.
ಜು.೨೫ರಂದು ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ನಿಲಯದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಇಲಾಖಾ ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಯೊಂದಿಗೆ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಒದಗಿಸಬೇಕಾದ ಸೌಲಭ್ಯಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು. ಸಾಯಂಕಾಲ ಲಿಂಗಸೂರಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಸದರಿ ತಂಡದೊಂದಿಗೆ ಭೇಟಿ ನೀಡಿ ಹೆಚ್ಚಿನ ವಿದ್ಯಾರ್ಥಿನಿಯರ ಪ್ರವೇಶಾತಿಯಿಂದಾಗಿ ಸದರಿ ವಸತಿ ನಿಲಯದಲ್ಲಿ ವಾಸ್ತವ್ಯದ ಸಮಸ್ಯೆಯ ಬಗ್ಗೆ ಪರಿಶೀಲಿಸಿ ೧೫ ದಿನಗಳ ಒಳಗಾಗಿ ಮತ್ತೊಂದು ಹೆಚ್ಚುವರಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಂದ್ರ ಜಲ್ದಾರ್, ದೇವದುರ್ಗ ತಾಲೂಕಿನ ಸಹಾಯಕ ನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರ ಅಧಿಕಾರಿಗಳು, ವಸತಿ ನಇಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.