ವಸತಿ ಕಟ್ಟಡದ ಚಪ್ಪಡಿ ಕುಸಿತ: ೭ ಮಂದಿ ಮೃತ್ಯು

ಥಾಣೆ, ಮೇ ೨೯- ವಸತಿ ಕಟ್ಟಡ ಚಪ್ಪಡಿ ಕುಸಿತದ ಪರಿಣಾಮ ಏಳು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಉಲ್ಹಾಸ್‌ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಅವಶೇಷಗಳಡಿಯಲ್ಲಿ ಮೃತದೇಹಗಳು ಸಿಲುಕಿರುವ ಸಾಧ್ಯತೆಗಳಿದ್ದು, ಹಾಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಲ್ಹಾಸ್‌ನಗರದ ನೆಹರೂ ಚೌಕ್​ ಬಳಿ ಸಾಯಿ ಸಿದ್ಧಿ ಹೆಸರಿನ ಐದು ಅಂತಸ್ತಿನ ಕಟ್ಟಡದ ಸ್ಲ್ಯಾಬ್ ಕುಸಿತದ ಪರಿಣಾಮ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿರುವ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮತ್ತಷ್ಟು ಮಂದಿ ಸಿಲುಕಿರುವುದಾಗಿ ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಠಾಣೆ ಮಹಾನಗರ ಪಾಲಿಕೆ (ಟಿಎಂಸಿ) ತಿಳಿಸಿದೆ. ರಕ್ಷಣಾ ಕಾರ್ಯ ಮುಂದುವರಿದಿದ್ದು ಸ್ಥಳದಲ್ಲಿ ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ನಿವಾಸಿಗಳ ಪ್ರಕಾರ, 1995 ರಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ 29 ಫ್ಲ್ಯಾಟ್‌ಗಳಿವೆ.ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಐದು ಫ್ಲಾಟ್‌ಗಳ ವಾಸದ ಕೋಣೆಯ ಚಪ್ಪಡಿಗಳು ಕೆಲವು ಸೆಕೆಂಡುಗಳಲ್ಲಿ ಮೇಲಿನ ಮಹಡಿಯಿಂದ ನೆಲ ಮಹಡಿಗೆ ಅಪ್ಪಳಿಸಿದೆ ಎಂದು ತಿಳಿಸಿದ್ದಾರೆ.