ವಸತಿ ಅಡುಗೆದಾರರಿಗೆ ವೇತನ ನೀಡಿ

ದೇವದುರ್ಗ.೧೪- ಕರೊನಾ ವೈರಸ್ ತಡೆಗೆ ಸರ್ಕಾರ ವಸತಿ ಶಾಲೆಗಳಲ್ಲಿ ಆರಂಭಿಸಿದ ಕ್ವಾರಂಟೈನ್ ಕೇಂದ್ರದಲ್ಲಿ ಅಲ್ಲಿನ ಜನರಿಗೆ ಅಡುಗೆ ಮಾಡಿದ ಸಿಬ್ಬಂದಿ ಹಾಗೂ ಕೂಲಿಕಾರರಿಗೆ ಬಾಕಿ ಇರುವ ೬ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಟಿಯುಸಿಐ ನೇತೃತ್ವದಲ್ಲಿ ಹಾಸ್ಟೆಲ್ ದಿನಗೂಲಿ ನೌಕರರ ಸಂಘ ಇತ್ತೀಚೆಗೆ ಮನವಿ ಸಲ್ಲಿಸಿದರು.
ಕರೊನಾ ತಡೆಗೆ ಮುಂಬೈ, ಪುಣೆ, ಮಹಾರಾಷ್ಟ್ರ ಹಾಗೂ ಆಂಧ್ರದಿಂದ ಮರಳು ಬಂದ ಕೂಲಿಕಾರ್ಮಿಕರನ್ನು ತಾಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆಲ್ಕೋಡ್, ಜಾಲಹಳ್ಳಿ, ಕೊತ್ತದೊಡ್ಡಿ, ಮಸರಕಲ್, ದೇವದುರ್ಗ ಸೇರಿ ಸುಮಾರು ೧೬ಕ್ವಾರಂಟೈನ್ ಕೇಂದ್ರ ತೆರೆಯಲಾಗಿತ್ತು. ಸತತ ೬ತಿಂಗಳ ಕಾಲ ಕೇಂದ್ರದಲ್ಲಿ ಸುಮಾರು ೨೦ಸಾವಿರಕ್ಕೂ ಹೆಚ್ಚು ಜನರಿಗೆ ಮೂರು ಹೊತ್ತು ಉಪಾಹಾರ, ಊಟ ಮಾಡಿ ಬಡಿಸಲಾಗಿದೆ.
ಜೀವನದ ಅಂಗು ತೊರೆಗೆ ಹಾಸ್ಟೆಲ್ ಕೂಲಿಕಾರರು, ಜವಾನರು, ಅಡುಗೆ ಸಹಾಯಕರು ಕೆಲಸ ಮಾಡಿದ್ದಾರೆ. ಆದರೆ, ಸರ್ಕಾರ ಇವರಿಗೆ ವೇತನ ನೀಡದೆ ವಂಚಿಸಿದೆ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ವೇತನ ನೀಡುವಂತೆ ಹಲವು ಸಲ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಕೂಡಲೇ ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಕಾರ್ಯ ನಿರ್ವಹಿಸಿದ ಕೂಲಿಕಾರರಿಗೆ ಬಾಕಿ ಇರುವ ೬ ತಿಂಗಳ ವೇತನ ತಕ್ಷಣ ಬಿಡುಗಡೆ ಮಾಡಬೇಕು. ವಿವಿಧ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಬಾಕಿ ಇರುವ ವೇತನ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಲ್ಲಯ್ಯ ಕಟ್ಟಿಮನಿ, ಲಾಳೆಸಾಬ್, ಶಿವರಾಜ ಮರಡಿ, ಬಸವರಾಜ, ಶಾಂತಪ್ಪ, ಗೀತಮ್ಮ, ಜಗದೀಶ, ನಾಗರಾಜ ಹೂಗಾರ, ರೇಣುಕಮ್ಮ, ಬಸಮ್ಮ, ಚನ್ನಮ್ಮ, ಹೊನ್ನಮ್ಮ, ಭಾಗ್ಯಮ್ಮ, ಭೀಮಣ್ಣ, ಮಹಿಬೂಬ್‌ಸಾಬ್ ಇತರರಿದ್ದರು