ವಲಸಿಗರ ಮೇಲೆ ಪೊಲೀಸ್ ಹದ್ದಿನ ಕಣ್ಣು

ಬೆಂಗಳೂರು, ಸೆ. ೧೬- ರಾಜ್ಯವನ್ನು ಯಾವುದೇ ಕಾರಣಕ್ಕೂ ಅಕ್ರಮ ವಲಸಿಗರ ತವರಾಗಲು ಇಲ್ಲವೇ ಧರ್ಮಛತ್ರವನ್ನಾಗಲು ಬಿಡುವುದಿಲ್ಲ ಎಂದು ಹೇಳಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಅಕ್ರಮ ವಲಸಿಗರ ಮೇಲೆ ಕಣ್ಣಿಡಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿಧಾನ ಪರಿಷತ್ತಿಲ್ಲಿಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರೋಹಿಂಗ್ಯ ವಲಸಿಗರು, ಬಾಂಗ್ಲಾ ಮುಸ್ಲಿಂರು, ಆಫ್ರಿಕನ್ ಪ್ರಜೆಗಳು ಸೇರಿದಂತೆ ಹಲವು ಮಂದಿ ವೀಸಾ ಅವಧಿ ಮುಗಿದಿದ್ದರೂ ಇರುವುದು ಪತ್ತೆಯಾಗಿದೆ. ಅವರ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಲಾಗಿದೆ ಎಂದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೋಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕಳುಹಿಸುವ ಸಂಬಂಧ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ. ಹೀಗಾಗಿ ೯೦ ಮಂದಿ ನಗರದಲ್ಲಿ ಇದ್ದಾರೆ ಎಂದು ಹೇಳಿದರು.
ಬೆಂಗಳೂರು ಸುತ್ತಮುತ್ತ ಇರುವ ವಿದೇಶಿಗರ ಚಲನವಲನದ ಮೇಲೆ ಕಣ್ಣಿಡಲು ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಬಾಂಗ್ಲಾ ದೇಶದ ವಲಸಿಗರನ್ನು ಪತ್ತೆಹಚ್ಚಲು ಸೂಚಿಸಲಾಗಿದೆ ಎಂದರು.
ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿರುವ ವಿದೇಶಿಗರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಿವಿಲ್ ಡಿಟೆಂನ್ಷನ್ ಕೇಂದ್ರಗಳನ್ನು ತೆರೆದು ಅಲ್ಲಿ ವೀಸಾ ಅವಧಿ ಮುಗಿದವರನ್ನು ಇಡಲಾಗಿದೆ. ಕೆಲವು ವಿದೇಶಿ ಪ್ರಜೆಗಳ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥವಾಗದೆ ಅವರನ್ನು ಕಳುಹಿಸುವಂತಿಲ್ಲ ಎಂದರು.
ಕಳೆದ ೨ ವರ್ಷಗಳ ಅವಧಿಯಲ್ಲಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಕ್ರಮ ವಲಸಿಗರನ್ನು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸದೆ ಅವರನ್ನು ಅವರ ದೇಶಕ್ಕೆ ಕಳುಹಿಸಿಲ್ಲ ಎಂದರು.
ರಾಜ್ಯದಲ್ಲಿ ಅಕ್ರಮ ವಲಸಿಗರ ವಿರುದ್ಧ ಅದರಲ್ಲೂ ವಿದೇಶಿ ವಲಸಿಗರ ಮೇಲೆ ಕಣ್ಣಿಡಲಾಗಿದೆ ಎಂದು ಅವರು ತಿಳಿಸಿದರು.
ಝೀರೋ ಟ್ರಾಫಿಕ್
ಝೀರೋ ಟ್ರಾಫಿಕ್ ವಿಷಯ ವಿಧಾನ ಪರಿಷತ್ತಿನಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ, ಆರೋಪ-ಪ್ರತ್ಯಾರೋಪಕ್ಕೂ ವೇದಿಕೆಯಾದ ಘಟನೆ ನಡೆಯಿತು.
ಶಾಸಕಿ ಶಶಿಕಲಾ ಜೊಲ್ಲೆ ಅವರು ಸಂಪುಟಕ್ಕೆ ಸೇರುವ ಸಂದರ್ಭದಲ್ಲಿ ತಡವಾಗಿದೆ ಎನ್ನುವ ಕಾರಣಕ್ಕಾಗಿ ಝೀರೋ ಟ್ರಾಫಿಕ್ ನೀಡಿರುವುದು ಹಾಗೂ ೨೦೧೯ ರಲ್ಲಿ ೧೪ ಶಾಸಕರು ಪಕ್ಷಾಂತರ ಮಾಡಿದಾಗ ಅವರಿಗೆ ಝೀರೋ ಟ್ರಾಫಿಕ್ ನೀಡಲಾಗಿದೆ ಎಂಬ ಹೇಳಿಕೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ನಾರಾಯಣಸ್ವಾಮಿ ಪ್ರಸ್ತಾಪಿಸಿದ ಈ ವಿಷಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿ ಆಕ್ಷೇಪಿಸಿದ್ದರಿಂದ ಎರಡೂ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆಯಿತು. ಇದರಿಂದಾಗಿ ವಿಧಾನ ಪರಿಷತ್‌ನಲ್ಲಿ ಕೆಲಕಾಲ ಕಾವೇರಿದ ವಾತಾವರಣ ಸೃಷ್ಠಿಯಾಗಿತ್ತು.
ನಾರಾಯಣಸ್ವಾಮಿ ಅವರು ಬಳಸಿದ ದ್ರೋಹ ಪದವನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಸಚಿವರಾದ ಎಂಟಿಬಿ ನಾಗರಾಜು, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು ಮತ್ತಿತರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪೊಲೀಸ್ ಇಲಾಖೆಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗಣ್ಯರು, ಅತಿ ಗಣ್ಯರು ಭದ್ರತಾ ವಿಭಾಗ ನೀಡುವ ಸೂಚನೆ ಆಧರಿಸಿ ಪೊಲೀಸರು ಸಂಚಾರಿ ಲೈಟ್ ನಿರ್ವಹಣೆ ಮಾಡಿ ಕರೆದುಕೊಂಡು ಹೋಗುತ್ತಾರೆ. ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಝೀರೋ ಟ್ರಾಫಿಕ್ ಬೇಡ ಎಂದು ಹೇಳಿದ್ದೇವೆ ಎಂದರು.
ಶಾಸಕಿಯಾಗಿದ್ದ ಶಶಿಕಲಾ ಜೊಲ್ಲೆ ಸಂಪುಟ ಸೇರುವ ಸಂದರ್ಭದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬರುವಾಗ ತಡವಾಗುತ್ತದೆ ಎನ್ನುವ ಕಾರಣಕ್ಕಾಗಿ ಸಿಗ್ನಲ್ ಫ್ರೀ ಮಾಡಿ ಟ್ರಾಫಿಕ್ ಲೈಟ್‌ಗಳನ್ನು ನಿರ್ವಹಣೆ ಮಾಡಿ ಕರೆದುಕೊಂಡು ಬರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಂತದಲ್ಲಿ ಮತ್ತೆ ಮಧ್ಯೆ ಪ್ರವೇಶಿಸಿದ ನಾರಾಯಣಸ್ವಾಮಿ, ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್ ನೀಡಿರುವ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ ಎಂದರು.
ಆಗ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಪೊಲೀಸರು ಝೀರೋ ಟ್ರಾಫಿಕ್ ಮಾಡಿಲ್ಲ. ಟ್ರಾಫಿಕೇ ಝೀರೋ ಆಗಿದೆ ಎಂದರು.
ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಹೆಚ್ಚಾದಾಗ ಸಭಾಪತಿ ಬಸವರಾಜು ಹೊರಟ್ಟಿ ಅವರು ಪ್ರಶ್ನೋತ್ತರ ಕಲಾಪ ಮುಗಿದಿದೆ ಎಂದು ಬೇರೆ ವಿಷಯವನ್ನು ಕೈಗೆತ್ತಿಕೊಂಡರು. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ ಮುಂದುವರೆದಿತ್ತು.