ವಲಸಿಗರ ಮೇಲೆ ದಾಳಿ ಸಮಿತಿ ರಚಿಸಿದ ನಿತೀಶ್

ಪಾಟ್ನಾ/ ಚೆನ್ನೈ, ಮಾ. ೪- ತಮಿಳುನಾಡಿನಲ್ಲಿ ಬಿಹಾರದ ವಲಸಿಗರ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ , ಪರಿಸ್ಥಿತಿ ಅವಲೋಕಿಸಲು ನಾಲ್ವರು ಸಮಿತಿ ರಚಿಸಿದ್ದಾರೆ.

ವಲಸಿಗರ ಮೇಲೆ ತಮಿಳುನಾಡಿನಲ್ಲಿ ನಡೆದ ದಾಳಿಯ ಆರೋಪದ ಮೇಲೆ ಪ್ರತಿಪಕ್ಷಗಳ ಒತ್ತಡದ ನಡುವೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮಿತಿ ರಚನೆ ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ, ಡಿ ಬಾಲಮುರುಗನ್, ಸಿಐಡಿ ಐಜಿಪಿ ಪಿ ಕಾನನ್, ಕಾರ್ಮಿಕ ಇಲಾಖೆ ವಿಶೇಷ ಕಾರ್ಯದರ್ಶಿ ಅಲೋಕ್ ಹಾಗು ಐಪಿಎಸ್ ಅಧಿಕಾರಿ ಸೇರಿದಂತೆ ನಾಲ್ವರ ಸಮಿತಿ ರಚನೆ ಮಾಡಿ ಘಟನೆ ಸಂಬಂದಿಸಿದಂತೆ ವರದಿ ನೀಡಲು ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.

ಈ ಸಂಬಂದ “ಬಿಹಾರ ಪೊಲೀಸ್ ಮಹಾ ನಿರ್ದೇಶಕರು ತಮಿಳುನಾಡು ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ..
ಬಿಹಾರ ಪೊಲೀಸ್‌ನ ಇತರ ಹಿರಿಯ ಅಧಿಕಾರಿಗಳು ತಮಿಳುನಾಡು ಪೊಲೀಸರ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎಡಿಜಿ ಗಂಗ್ವಾರ್ ತಿಳಿಸಿದ್ದಾರೆ

“ಕೆಲವು ಹಳೆಯ ವೈಯಕ್ತಿಕ ವಿವಾದಗಳ ವೀಡಿಯೊಗಳನ್ನು ಚಿತ್ರೀಕರಿಸಲಾಗಿದೆ ಮತ್ತು ಅದು ಬಿಹಾರದ ನಿವಾಸಿಗಳ ವಿರುದ್ಧ ಎಂದು ಪ್ರಕಟಿಸಲಾಗಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸಿ ಸೈಲೇಂದ್ರ ಬಾಬು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಸುಳ್ಳು ಮತ್ತು ಕಿಡಿಗೇಡಿತನದಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದ್ದಾರೆ.