ವಲಸಿಗರಿಗೆ ಉದ್ಯೋಗದ ಆಸರೆ

ನವದೆಹಲಿ. ನ. ೧೩- ವಲಸೆ ಕಾರ್ಮಿಕರಿಗೆ ಉದ್ಯೋಗ ಸೌಲಭ್ಯ ಕಲ್ಪಿಸಲು ವಿಶೇಷ ಉದ್ಯೋಗ ಯೋಜನೆಯೊಂದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಇದಕ್ಕಾಗಿ ಹತ್ತು ಸಾವಿರ ಕೋಟಿ ರೂಗಳನ್ನು ಹೆಚ್ಚುವರಿಯಾಗಿ ಒದಗಿಸಲು ತೀರ್ಮಾನಿಸಿದೆ.
ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಮೋದಿ ಸರ್ಕಾರ ಪ್ರಕಟಿಸಿರುವ ಮೂರನೇ ಪ್ಯಾಕೇಜ್ ಇದಾಗಿದ್ದು ವಲಸೆ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರದ ವಿಶೇಷ ಯೋಜನೆಗಳನ್ನು ಅವಲಂಬಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಲಾಕ್‌ಡೌನ್ ಹಾಗೂ ಅನ್ಲಾಕ್ ವ್ಯವಸ್ಥೆಗಳನ್ನು ಜಾರಿಗೊಳಿಸಿದ ನಂತರ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಿದೆ ಆದರೂ ವಲಸೆ ಕಾರ್ಮಿಕರಿಗೆ ಉದ್ಯೋಗದ ಭರವಸೆ ಖಚಿತವಾ ಗ ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಉದ್ಯೋಗ ಯೋಜನೆಯನ್ನು ಪ್ರಕಟಿಸಿದೆ.
ಪ್ರಧಾನಮಂತ್ರಿಯವರ ಗರೀಬ್ ಕಲ್ಯಾಣ ರೋಜ್ಗಾರ್ ಯೋಜನೆ ದೇಶದ ೧೧೬ ಜಿಲ್ಲೆಗಳಲ್ಲಿ ಪ್ರಸ್ತುತ ಜಾರಿಯಲ್ಲಿದ್ದು ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ ೩೯ ಸಾವಿರದ ೨೯೨ ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಈ ಯೋಜನೆಗೆ ೫೦ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಉದ್ದೇಶಿಸಲಾಗಿದೆ.
ಇದರ ಜೊತೆಗೆ ಇನ್ನೂ ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ವಿಶೇಷವಾಗಿ ಗ್ರಾಮೀಣ ಜನರಿಗೆ ಮನೆಗಳ ನಿರ್ಮಾಣ ಮತ್ತು ಜಲ ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲು ಯೋಜನೆಗೆ ಒತ್ತು ನೀಡಲು ಉದ್ದೇಶಿಸಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ಪ್ರಸ್ತುತ ಪ್ರಸ್ತುತ ೩೨೦ ಕೋಟಿ ಮಾನವ ದಿನಗಳು ಉದ್ಯೋಗ ಕಲ್ಪಿಸಲು ಅಂದಾಜು ಮಾಡಲಾಗಿದೆ. ಇದೊಂದು ಬೃಹತ್ ಯೋಜನೆಯಾಗಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.
ಇದೇ ಕಾರಣಕ್ಕಾಗಿ ಹೆಚ್ಚುವರಿಯಾಗಿ ೧೦ ಸಾವಿರ ಕೋಟಿ ರೂಗಳನ್ನು ಒದಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ . ಗರೀಬ್ ಕಲ್ಯಾಣ ಯೋಜನೆ ಅಡಿ ವಿವಿಧ ೨೫ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶವಿದೆ.
ಕಳೆದ ಜೂನ್ ತಿಂಗಳಲ್ಲಿ ಯೋಜನೆಯನ್ನು ಆರಂಭಿಸಲಾಗಿದ್ದು ಪ್ರಸ್ತುತ ೬ ರಾಜ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ವಲಸೆ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಯೋಜನೆ ಪೂರಕವಾಗಿದೆ.
ಗ್ರಾಮೀಣ ಭಾಗದಲ್ಲಿ ಮೂರು ಲಕ್ಷ ೭೭೦೦೦ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಂದು ಲಕ್ಷದ ೨೧ ಸಾವಿರದಷ್ಟು ಜಲ ಸಂರಕ್ಷಣೆ ಯೋಜನೆ ಹಾಗೂ ಮಳೆ ನೀರು ಕೊಯ್ಲು ಯೋಜನೆಗಳನ್ನು ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಭಾರತ್ ನೆಟ್ ಯೋಜನೆಯಡಿ ಫೈಬರ್ ಆಪ್ಟಿಕ್ ಕೇಬಲ್ ಅಳವಡಿಸುವ ಸಂಬಂಧ ೯೨ ಸಾವಿರದ ೧೫೮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ೨೦೨೦ ಹಾಗೂ ೨೧ ನೇ ಆರ್ಥಿಕ ವರ್ಷದಲ್ಲಿ ಖರ್ಚು ಮಾಡಲು ಉದ್ದೇಶಿಸಲಾಗಿದೆ.
ಕಳೆದ ಮೂರು ತಿಂಗಳಿಂದ ಉದ್ಯೋಗ ಖಾತರಿ ಯೋಜನೆಯಡಿಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಭಾರಿ ಬೇಡಿಕೆ ಉಂಟಾಗಿದೆ.ಚಳಿಗಾಲದ ಹಂಗಾಮು ಮುಗಿದ ನಂತರ ಇನ್ನಷ್ಟು ಉದ್ಯೋಗ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.