ವಲಸಿಗರಿಗೆ ಆರ್ಥಿಕ ನೆರವು ನೀಡಲು ರಾಗಾ ಆಗ್ರಹ

ನವದೆಹಲಿ.ಏ.೨೦- ದೆಹಲಿಯಲ್ಲಿ ಒಂದುವಾರ ಲಾಕ್‌ಡೌನ್ ಜಾರಿಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಕಾರ್ಮಿಕರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ಒದಗಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್‌ಗಾಂಧಿ, ದೆಹಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಸಾವಿರಾರು ಮಂದಿ ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಅವರಿಗೆ ಕೆಲಸವೂ ಇಲ್ಲ, ದುಡಿಮೆಯೂ ಇಲ್ಲ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ಜನರೇ ಕೊರೊನಾ ಸೋಂಕು ಹರಡುತ್ತಿದೆ ಎಂದು ಸರ್ಕಾರ ದೂರುತ್ತಿದೆ. ಇಂತಹ ಸರ್ಕಾರದಿಂದ ನಾಗರಿಕರಿಗೆ ನೆರವು ಸಿಗುವುದು ಅಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಎಐಸಿಸಿ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಟ್ವೀಟ್ ಮಾಡಿದ್ದು, ಸೂಕ್ತ ಸಮಯದಲ್ಲಿ ಲಾಕ್‌ಡೌನ್ ಮಾಡುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ, ದೇಶದಲ್ಲಿ ಕೊರೊನಾ ಸ್ಥಿತಿ ಭೀತಿ ಹುಟ್ಟಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ವಲಸೆ ಕಾರ್ಮಿಕರು ನಗರಗಳನ್ನು ತೊರೆದು ಮತ್ತೆ ತಮ್ಮ ಊರಿನತ್ತ ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯ ನೆರವು ನೀಡಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.