ವರ ಮಹಾಲಕ್ಷ್ಮಿ ಹಬ್ಬದಿಂದ ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹ  ಪುನಾರಾರಂಭ : ಜನಾರ್ದನ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.22 : ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಗತವೈಭವದ  ಪುನಾರರಂಭಕ್ಕೆ ಚಾಲನೆ ನೀಡಲಾಗುವುದು. ಮುಂಬರುವ ವರ ಮಹಾಲಕ್ಷ್ಮಿ ಹಬ್ಬದಿಂದ ಸಾಮೂಹಿಕ ವಿವಾಹ  ಆಯೋಜಿಸಲಾಗುವುದೆಂದು ಗಂಗಾವತಿ ಶಾಸಕ, ಮಾಜಿ ಸಚಿವ  ಗಾಲಿ ಜನಾರ್ಧನರೆಡ್ಡಿ  ಹೇಳಿದ್ದಾರೆ.
ಅವರು ನಿನ್ನೆ  ಗಂಗಾವತಿ ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರ ಆತ್ಮಾವಲೋಕನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳ್ಳಾರಿಯ ಜನತೆ ಯಾರಿಗೂ ಹೆದರುವ ಅಗತ್ಯ ಇಲ್ಲ, ಬಳ್ಳಾರಿಯಲ್ಲಿ ಮತ್ತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದರ ಆರಂಭವಾಗಿ ಬರುವ ವರ ಮಹಾಲಕ್ಷ್ಮಿ ಹಬ್ಬದ ದಿನದಿಂದ ಬಳ್ಳಾರಿಯಲ್ಲಿ ಸಾಮೂಹಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ, ಹಿಂದು ,ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಿಯರಿಗೂ ಸಾಮೂಹಿಕ ವಿವಾಹ  ನಡೆಸಲಾಗುತ್ತದೆಂದರು.
ಪಕ್ಷ ಸ್ಥಾಪನೆಗೂ ಮುಂಚೆ ನನ್ನನ್ನು ಪಕ್ಷಕ್ಕೆ ಬರಮಾಡಿಕೊಳ್ಳಿ ಎಂದು ಬಿಜೆಪಿ ಪಕ್ಷದ ಮುಖಂಡರುಗಳ ಮನೆ ಬಾಗಿಲಿಗೆ ನಾನು ಹೋಗಿಲ್ಲ.
ಅಮಿತ್ ಷಾ, ನರೇಂದ್ರ ಮೋದಿಯವರ ಬಳಿಯೂ ಹೋಗಿಲ್ಲ, ಎಷ್ಟೋ ಬಾರಿ ಅಮಿತ್ ಷಾ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ನಾನು ಅವರಿಗೆ ಸಿಕ್ಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷವನ್ನು ನಾನೇ ದೂರ ಇಟ್ಟೆ ಎಂದು ಜನಾರ್ದನ ರೆಡ್ಡಿ ಅವರು ಮಾರ್ಮಿಕವಾಗಿ ನುಡಿದರು.
ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಎರಡನೇ ಸ್ಥಾನದಲ್ಲಿ ಬಂದಿದ್ದಾರೆ. ಕೇವಲ ನೂರು ದಿನಗಳಲ್ಲಿ ಪಕ್ಷದ ಅಭ್ಯರ್ಥಿ ಲಕ್ಷ್ಮಿಅರುಣರವರು ಕ್ಷೇತ್ರದ ಹೆಚ್ಚಿನ ಜನರ ಮನಸ್ಸು ಮುಟ್ಟುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದರು.
ಇನ್ನೂ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಾನು ಬೆಳಸಿದ ಹೇಡಿಗಳು, ನನ್ನ ಅಣ್ಣ ತಮ್ಮಂದಿರು, ಸ್ನೇಹಿತರು ಸೇರಿದಂತೆ ಎಲ್ಲರೂ ಇಂದು ಮನೆಯಲ್ಲಿ ಕೂಡುವ ಪರಿಸ್ಥಿತಿ ಬಂದಿದೆ, ನಾನೊಬ್ಬನೆ ಇಂದು ವಿಧಾನ ಸೌಧಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ,  ತಮ್ಮನ್ನು ಬಳಸಿಕೊಂಡು ಉತ್ತಮ ಸ್ಥಾನಕ್ಕೆ ಹೋಗಿ ಇಂದು ಸೋತಿರುವ ಪ್ರಮುಖ ನಾಯಕರುಗಳಿಗೆ ಕುಟುಕಿದರು.
ಮುಂದಿನ ದಿನಗಳಲ್ಲಿ ಬರುವ ಹಾಗೂ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ, ಲೋಕಸಭೆ ಚುನಾವಣೆ ಸೇರಿದಂತೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆ ಆರ್ ಪಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕು, ಬಳ್ಳಾರಿಯಲ್ಲಿ ಆದ ಸೋಲಿನಿಂದ ಕಾರ್ಯಕರ್ತರು ಎದೆಗುಂದದೆ ಸಂಘಟನೆಗೆ ಮುನ್ನುಗ್ಗಿ ಎಂದರು. ಬಳ್ಳಾರಿ ಮಹಾನಗರಪಾಲಿಕೆಯಲ್ಲಿ ಈ ಬಾರಿ ಎಲ್ಲಾ ವಾರ್ಡಗಳಲ್ಲಿ ಕೆ ಆರ್ ಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ಆ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಬಳ್ಳಾರಿ ಹಾಗೂ ಗಂಗಾವತಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ವಿಧಾನ ಸೌಧದಲ್ಲಿ ಧ್ವನಿ ಎತ್ತಿ ನಾನು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ, ಬಿಜೆಪಿ ಪಕ್ಷದ ಅಷ್ಟು ಶಾಸಕರಿಗೆ ನಾನೊಬ್ಬನೆ ಸಮ ಎಂದರು. ವಿಧಾನ ಸೌಧದಲ್ಲಿ  ನೂರು ಜನ ಶಾಸಕರು ಮಾಡುವ ಕೆಲಸವನ್ನು ನಾನೊಬ್ಬನೆ ಮಾಡಿ ತೋರಿಸುತ್ತೇನೆ, ನೂರು ಜನ ಶಾಸಕರಿಗೆ ಈ ಒಬ್ಬ ಗಾಲಿ ಜನಾರ್ದನರೆಡ್ಡಿ ಸಮ ಎಂದರು.
ಇದಕ್ಕೂ ಮುನ್ನ ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಮಾತನಾಡಿ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿದ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಹೇಳಿದರು. ನನ್ನ ಸೋಲಿಗೆ ಐದು ಗ್ಯಾರಂಟಿಗಳು ಕಾರಣ, ಆದರೆ ಆ ಗ್ಯಾರಂಟಿಗಳು ಶಾಶ್ವತ ಅಲ್ಲ, ಈಗ ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ ಜನರು ಮುಂದಿನ ದಿನಗಳಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದರು. ಬಳ್ಳಾರಿ ಜನರಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಎರಡು ಕೊಠಡಿಗಳ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೆರೂರು, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಗೋನಾಳ ರಾಜಶೇಖರಗೌಡ ಸೇರಿದಂತೆ ಪ್ರಮುಖರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಶ್ರೀನಿವಾಸ ರೆಡ್ಡಿ, ಕೋನಂಕಿ ತಿಲಕ್ , ವೆಂಕಟರಮಣ, ಸಂಜಯ ಬೆಟಗೇರಿ, ಶರವಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು