ವರ್ಷ ಕಾಲ ದೇಶಾದ್ಯಂತ ಶ್ರೀರಾಮ ಸೇವೆ-ದೇಶ ಸೇವೆ ಸಂಕಲ್ಪ ಅಭಿಯಾನ :ಉಡುಪಿ ಪೇಜಾವರ ಶ್ರೀ

ವಿಜಯಪುರ:ಜ.18: ಮುಂದಿನ ವರ್ಷ ಅಂದರೆ 2024ರ ಮಕರ ಸಂಕ್ರಮಣದಂದು ಆಯೋಧ್ಯೆಯನ್ನು ಭವ್ಯ ಶ್ರೀರಾಮ ಮಂದಿರದ ಪ್ರಥಮ ಹಂತದ ಯೋಜನೆಯ ನಿರ್ಮಾಣ ಕಾರ್ಯ ಪೂರ್ತಿಗೊಂಡು ಮರ್ಯಾದಾ ಪುರುಷೋತ್ತಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆ ಜರುಗಲಿದೆ” ಎಂದು ರಾಮ ಮಂದಿರ ನಿರ್ಮಾಣ ಟ್ರಸ್ಟಿ ಹಾಗೂ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು

ಇಂದಿಲ್ಲಿಯ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮಕರ ಸಂಕ್ರಮಣದಿಂದ ಮುಂದಿನ ಒಂದು ವರ್ಷದ ಕಾಲಾವಧಿಯಲ್ಲಿ ದೇಶಾದ್ಯಂತ ಶ್ರೀರಾಮನ ನೆನಪಿಗಾಗಿ ಒಂದಿಲ್ಲೊಂದು ಜನೋಪಯೋಗಿ ಕಾರ್ಯವನ್ನು ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ವಿವರಿಸಿದರು.

ಈ ಕುರಿತು ಮಾಧ್ಯಮದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವರ್ಷಾದ್ಯಂತ ಶ್ರೀರಾಮ ಸೇವೆ- ದೇಶ ಸೇವೆಯ ಸಂಕಲ್ಪ ಅಭಿಯಾನಕ್ಕೆ ಈ ವóರ್ಷದ ರಾಮನವಮಿ ಬಳಿಕ ಒಂದು ಶುಭ ಮುಹೂರ್ತದಲ್ಲಿ ಚಾಲನೆ ನೀಡು ವಂತೆ ಕೋರಲಾಗುವದು ಅಲ್ಲದೇ ಪ್ರಧಾನಿಗಳಿಗೆ ಪತ್ರ ಬರೆದು ಈ ಕುರಿತು ವಿವರಿಸಲಾಗುವದಲ್ಲದೇ ಮುಖತ: ಭೇಟಿ ಅರಿಕೆ ಮಾಡುವದಾಗಿ ಸ್ವಾಮಿಜಿ ತಿಳಿಸಿದರು.

ದೇಶಾದ್ಯಂತ ಎಲ್ಲರ ಬಹುದಿನದ ಕನಸು ನನಸಾಗುವ ಕಾಲ ಕೂಡಿ ಬಂದಿದ್ದು, ಒಟ್ಟಾರೆಯಾಗಿ ಮೂರು ಹಂತದ ಕಾಮಗಾರಿ ನಿರ್ಮಾಣ ಆಗಲಿದ್ದು, ಅದರಲ್ಲಿ ಮೊದಲ ಹಂತದ ಕಾಮಗಾರಿ ಪೂರ್ತಿಗೊಂಡು ಲೋಕಾರ್ಪಣೆಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಬಾಕಿಇರುವ ಎರಡು ಹಂತದ ಕಾಮಗಾರಿ ಮುಗಿಯಲಿದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ಭೂಮಿ ಮರಳಿನಿಂದ ಕೂಡಿದ್ದು, ಹೀಗಾಗಿ ಮಂದಿರ ನಿರ್ಮಾಣ ಕಾರ್ಯ ನಿಗದಿತ ವೇಳೆಗಿಂತ ಕೊಂಚ ವಿಳಂಬವಾಗಿದೆ. ಶಿಲೆಗಳ ಕಂಬಗಳನ್ನು ಅಳವಡಿಸುವ ಕಾರ್ಯ ಇರುವದರಿಂದ ಅಡಿ ಪಾಯ ಗಟ್ಟಿಗೊಳಿಸಲು ಸುಮಾರು 40ಅಡಿಗಳಷ್ಟು ಭೂಮಿಯನ್ನು ಅಗೆದು ಅಲ್ಲಿ ಗರಸು ತುಂಬಲಾಯಿತು ಎಂದು ನಿರ್ಮಾಣ ಕಾರ್ಯದ ಹೊಣೆ ಹೊತ್ತಿರುವ ಎಲ್ ಆಂಡ್ ಟಿ ಕಂಪನಿ ವಿವರಣೆ ನೀಡಿದೆ ಎಂದು ಹೇಳಿದರು.

ಈಗ್ಗೆ ಎರಡು ವರ್ಷಗಳ ಹಿಂದೆ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ದೇಶದೆಲ್ಲಡೆಯಿಂದ ನಿಧಿ ಸಮರ್ಪಣಾ ಕಾರ್ಯ ಆರಂಭವಾಗಿತ್ತು, ಅದರಲ್ಲಿ ಬಡ-ಬಲ್ಲಿದರು ಜಾತಿ ಭೇದ ಎಣಿಸದೇ ಸಕಲರೂ ಸಂತೋಷದಿಂದ ಭಾಗಿಯಾಗಿದ್ದರು.

ಒಂದು ವರ್ಷ ಕಾಲ ನಡೆಯಲಿರುವ ರಾಮಸೇವೆ-ದೇಶ ಸೇವೆಯ ಅಭಿಯಾನದಲ್ಲಿ ಜಾತ್ಯಾತೀತವಾಗಿ ಎಲ್ಲರೂ ಭಾಗವಹಿಸಬಹುದಾಗಿದ್ದು, ಈ ಸೇವೆಗೆ ಯಾವುದೇ ಕಟ್ಟು ಪಾಡುಗಳಿರುವದಿಲ್ಲ. ಯಾವುದೇ ವ್ಯಕ್ತಿಯು ತಾವು ಮಾಡುತ್ತಿರುವ ವೃತ್ತಿಯಲ್ಲಿಯೇ ಅಭಿಯಾನದಲ್ಲಿ ಭಾಗವಹಿಸಬಹುದು. ದೇಶದಾದ್ಯಂತದ ಸಂಘ ಸಂಸ್ಥೆಗಳು ಸಹ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲ ಕೈಜೋಡಿಸಬೇಕಿದೆ ಎಂದು ವಿವರಿಸಿದರು.

ಶ್ರೀರಾಮಚಂದ್ರನ ಆದರ್ಶಗಳನ್ನು ಪಾಲಿಸುವ ಕಾರ್ಯ ಇಡೀ ದೇಶಾದ ಉದ್ದಗಲಕ್ಕೂ ನಡೆಯುವ ಮೂಲಕ ರಾಮ ರಾಜ್ಯ ನಿರ್ಮಾಣ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟ ಶ್ರೀಗಳು, ಸಧ್ಯ ರಾಮರಾಜ್ಯವಿಲ್ಲದೇ ಪ್ರಜಾರಾಜ್ಯವಿದೆ. ಹೀಗಾಗಿ ಪ್ರಜೆಗಳ ಮೂಲಕವೇ ರಾಮರಾಜ್ಯ ನಿರ್ಮಾಣ ಮಾಡುವದಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಂಡಿತ ಮಧ್ವಾಚಾರ್ಯ ಮೋಖಾಶಿ, ಶ್ರೀ ಕೃಷ್ಣ ವಾದಿರಾಜ ಮಠದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಗೋಪಾಲ ನಾಯಕ, ಡಾ. ಎಸ್ ಆರ್ ಮಲಘಾಣ, ಡಾ ಉಪೇಂದ್ರ ನರಸಾಪುರ, ಆರ್ ಬಿ ಕುಲಕರ್ಣಿ, ಅಶೋಕ ಕಾಳಗಿ, ಶ್ರೀ ಹರಿ ಗೊಳಸಂಗಿ ಮಠದ ಅರ್ಚಕ ವಾಸುದೇವಾಚಾರ್ಯ ಅಗ್ನಿಹೊತ್ರಿ ಮತ್ತೀತರರು ಉಪಸ್ಥಿತರಿದ್ದರು.