ವರ್ಷಾಂತ್ಯಕ್ಕೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಕೆಲಸ ಆರಂಭಿಸಬೇಕು:ಡಾ.ಉಮೇಶ ಜಾಧವ

ಕಲಬುರಗಿ:ಫೆ.11: ಜೇವರ್ಗಿ ರಸ್ತೆಯ ಹೊನ್ನಕಿರಣಗಿ-ಫರಹತಾಬಾದ ಬಳಿ ಕೇಂದ್ರ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಇದೇ ವರ್ಷಾಂತ್ಯಕ್ಕೆ ಆರಂಭಿಸಲಿ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಸದ ಡಾ.ಉಮೇಶ ಜಾಧವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರವಿವಾರ ಇಲ್ಲಿನ ಡಿ.ಸಿ ಕಛೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ “ದಿಶಾ” ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾರ್ಕ್ ಸ್ಫಾನೆಯಾದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲಿದ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 2 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಈಗಾಗಲೆ ಸೂರತ್-ಚೆನ್ನೈ ಎಕಾನಾಮಿಕ್ ಕಾರಿಡಾರ್ ಹೈವೇ ಕಾಮಗಾರಿ ಜೇವರ್ಗಿ ಮೂಲಕ ಹಾದು ಹೋಗುತ್ತಿರುವುದರಿಂದ ಹತ್ತಿ ರಪ್ತಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಭವಿಷ್ಯದಲ್ಲಿ ಹತ್ತಿ ಉದ್ಯಮದಲ್ಲಿ ಕಲಬುರಗಿ ದಾಪುಗಾಲು ಇಡಲಿದೆ ಎಂದರು.
ಮೆಗಾ ಟೆಕ್ಸ್ ಟೈಲ್ ಪಾರ್ಕ್ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಫೆನ್ಸಿಂಗ್ ಕಾರ್ಯ ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ನೀರಿನ ಸಮಸ್ಯೆ ಇದ್ದು, 76 ಎಂ.ಎಲ್.ಡಿ ನೀರಿನ ಅವಶ್ಯಕತೆ ಇದೆ. ಈಗಾಗಲೆ ಇಲ್ಲಿ ಹೂಡಿಕೆಗೆ 10 ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಎರಡನೇ ಸ್ಟೇಕ್ ಹೋಲ್ಡರ್ ಸಭೆ ಕರೆದಿದ್ದು, ಅಲ್ಲಿ ಇನ್ನು 10-12 ಕಂಪನಿಗಳ ಹೂಡಿಕೆಗೆ ಒಪ್ಪಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.